ಬೆಳಗಾವಿ: ನಾನೋರ್ವ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯಾಗಿ ಕಾನೂನು ಉಲ್ಲಂಘಿಸುವುದು ಸರಿಯಲ್ಲ. ಆದ್ದರಿಂದ ಕಾನೂನು ಪ್ರಕಾರವೇ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುತ್ಥಳಿ ವಿವಾದ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಾಗಿನೆಲೆ ಸ್ವಾಮೀಜಿಯವರು ನನ್ನೊಂದಿಗೆ ಮಾತನಾಡಿದ್ದಾರೆ. ಈ ವಿಷಯದ ಬಗ್ಗೆ ಸರ್ವ ಪಕ್ಷದ ನಾಯಕರ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ, ಮಾಜಿ ಸಚಿವ ರೇವಣ್ಣ ಹಾಗೂ ಸ್ಥಳೀಯ ನಾಯಕರ ಜೊತೆ ಮಾತನಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಂತರ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಕಾನೂನಿನ ಚೌಕಟ್ಟಿನಲ್ಲಿ ವಿವಾದ ಇತ್ಯರ್ಥಪಡಿಸುವ ಪ್ರಯತ್ನ ಮಾಡುತ್ತೇನೆ. ಕಾನೂನು ಪಂಡಿತರು ಹಾಗೂ ಜಿಲ್ಲಾಡಳಿತದ ಜೊತೆ ಚರ್ಚಿಸಿ ಮಾಹಿತಿ ಕಲೆಹಾಕುತ್ತೇನೆ. ಈ ಬಗ್ಗೆ ಇತರರೊಂದಿಗೆ ಚರ್ಚೆ ಮಾಡಿ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದ್ದಾರೆ.