ಬೆಂಗಳೂರು : ಕೊರೊನಾ ಲಾಕ್ಡೌನ್ ಹಿನ್ನೆಲೆ ಕೆಲಸಕ್ಕೆ ಹಾಜರಾಗಿಲ್ಲ ಎಂದು ನೆಪ ಹೇಳಿ ಕಾರ್ಮಿಕರನ್ನು ವಜಾಗೊಳಿಸಿದ ಕಂಪನಿಗೆ ನೂರಾರು ಗಾರ್ಮೆಂಟ್ಸ್ ನೌಕರರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಭಟ್ಟರಹಳ್ಳಿ ಸಮೀಪದ ಅರವಿಂದ್ ಗಾರ್ಮೆಂಟ್ಸ್ ಕೊರೊನಾ ನೆಪವೊಡ್ಡಿ ಕಾರ್ಮಿಕರಿಂದ ಬಲವಂತವಾಗಿ ರಾಜೀನಾಮೆ ಪಡೆಯುತ್ತಿದೆ. ಕಂಪನಿ ಆಡಳಿತ ಮಂಡಳಿಯ ಈ ಕ್ರಮ ಖಂಡಿಸಿ ನೂರಾರು ಮಹಿಳಾ ನೌಕರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ರಾಜೀನಾಮೆ ಪತ್ರಕ್ಕೆ ಹೆಬ್ಬೆಟ್ಟು ಮುದ್ರೆ ಒತ್ತಿಸಿ ಕೆಲಸದಿಂದ ತೆಗೆದು ಹಾಕುತ್ತಿದೆ. ಕೇಂದ್ರ ಸರ್ಕಾರದಿಂದ ವೇತನ ಕಡಿತಗೊಳಿಸಬಾರದು ಎಂಬ ಆದೇಶವಿದ್ದರೂ ಸಹ ಕಿಮ್ಮತ್ತೂ ನೀಡದೆ ಸಂಬಳ ಕೊಡದೆ ವಂಚಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಭಟ್ಟರಹಳ್ಳಿಯ ಫ್ಯಾಕ್ಟರಿಯಲ್ಲಿ 750ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಕೆಲಸಕ್ಕೆ ಬಂದಿಲ್ಲ ಹಾಗೂ ಫ್ಯಾಕ್ಟರಿ ನಷ್ಟದಿಂದ ಮುಚ್ಚುತ್ತೇವೆ ಎಂದು ಗ್ರಾಮಾಂತರ ಪ್ರದೇಶಗಳಿಂದ ಬರುವ ನೌಕರರು 350ಕ್ಕೂ ಕಾರ್ಮಿಕರಿಗೆ ಸಂಬಳವೂ ನೀಡದೆ ಬಲವಂತವಾಗಿ ರಾಜೀನಾಮೆ ಬರೆಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಗಂಭೀರವಾಗಿ ಆರೋಪಿಸಿದ್ದಾರೆ.
ಕಂಪನಿಯ ವ್ಯವಸ್ಥಾಪಕ ನಾಗೇಶ್ ಮಾತನಾಡಿ ಕೊರೊನಾದಿಂದಾಗಿ ಗಾರ್ಮೆಂಟ್ಸ್ನಲ್ಲಿ ಕೆಲಸ ಕಡಿಮೆಯಾಗಿದೆ. ಕಂಪನಿ ನಷ್ಟದಲ್ಲಿರುವುದರಿಂದ ಸ್ವಇಚ್ಛೆಯಿಂದ ಕೆಲವರು ರಾಜೀನಾಮೆ ನೀಡುತ್ತಿದ್ದಾರೆಯೇ ಹೊರತು ತಾವು ರಾಜೀನಾಮೆ ಕೇಳಿಲ್ಲ. ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚಾದ ನಂತರ ಅವರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು.