ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡ ಭಾವುಟಗಳ ಕಂಪಲ್ಲಿ ತಾಯಿ ಭುವನೇಶ್ವರಿಯ ಹಬ್ಬ ಜೋರಾಗಿದೆ. ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಬಹಳ ಅದ್ದೂರಿಯಾಗಿ ಆಚರಿಸಲಾಗಿದೆ. ಅದೇ ರೀತಿ ಕನ್ನಡ ಚಿತ್ರರಂಗದ ಬಹುಮುಖ್ಯ ಅಂಗವಾಗಿರೋ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕನ್ನಡ ರಾಜ್ಯೋತ್ಸವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಫಿಲ್ಮ್ ಚೇಂಬರ್ನಲ್ಲಿ ಕನ್ನಡ ರಾಜ್ಯೋತ್ಸವ ಮಾಡೋದಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ನಟಿ ಆರುಂಧತಿ ನಾಗ್ ಆಗಮಿಸಿ ಧ್ವಜಾರೋಹಣ ಮಾಡಿದರು. ಅರುಂಧತಿ ನಾಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್, ಸುಂದರ್ ರಾಜ್, ಎ ಚಿನ್ನೇಗೌಡ್ರು ಸೇರಿದಂತೆ ಫಿಲ್ಮ್ ಚೇಂಬರ್ ಪಧಾದಿಕಾರಿಗಳು ಸಾಥ್ ನೀಡಿದರು.
ನಂತರಫಿಲ್ಮ್ ಚೇಂಬರ್ ಮುಂಭಾಗ ಡಾ.ರಾಜ್ ಪುತ್ಥಳಿಗೆ ಹೂವಿನ ಮಾಲೆ ಹಾಕುವ ಮೂಲಕ ಸ್ಮರಿಸಲಾಯಿತು. ಇದೇ ಸಂಧರ್ಭದಲ್ಲಿ ಅರುಂಧತಿ ನಾಗ್ ಅವರಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ನೇತೃತ್ವದಲ್ಲಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಹಿರಿಯ ನಟಿ ಅರುಂಧತಿ ನಾಗ್, ನಾನು ಬೆಂಗಳೂರಿಗೆ ಬಂದು 42 ವರ್ಷಗಳಾಯ್ತು. ಇಲ್ಲಿವರೆಗೂ ಧ್ವಜಾರೋಹಣ ಮಾಡಿಲ್ಲ. ಇವತ್ತು ಆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದರು.
ಬಳಿಕ ಶಂಕರನಾಗ್ ಅವರನ್ನು ನೆನಪಿಸಿಕೊಂಡ ನಟಿ, ಶಂಕರ್ ಕಡಿಮೆ ಕಾಲ ಬದುಕಿದ್ದರೂ ಅವರ ಕನ್ನಡಕ್ಕಾಗಿ ಸೇವೆ ಮಾಡಿದ್ದಾರೆ. ಆದರೆ, ಶಂಕರ್ ಹಾಗೂ ಪುನೀತ್ ರಾಜ್‍ಕುಮಾರ್ ಇಷ್ಟು ಚಿಕ್ಕ ವಯಸ್ಸಿಗೆ ತೀರಿಕೊಳ್ಳಬಾರದಿತ್ತು ಎಂದು ಭಾವುಕರಾದರು.
ಇನ್ನು ಶಂಕರ್ ಮೆಟ್ರೋ ಆಗಬೇಕು ಅನ್ನೋ ಕನಸಿಗಾಗಿ ಸ್ವಂತ ಖರ್ಚಿನಲ್ಲಿ ಲಂಡನ್ ಹೋಗಿದ್ದರು. ಯಾಕೆ ಇಷ್ಟು ಖರ್ಚು ಮಾಡ್ತೀಯಾ ಎಂದು ಅವರನ್ನು ಕೇಳಿದಾಗ, ಇದು ನನ್ನ ನಾಡು. ನನ್ನ ಬೆಳೆಸಿದ್ದು ಈ ಸಿನಿಮಾ, ಈ ನಾಡು ಎಂದಿದ್ದರು. ಅವರ ಆದರ್ಶಗಳ ನೆರಳಲ್ಲಿ ಇಂದಿನ ಯುವಕರು ಬೆಳಿಯಬೇಕು ಎಂದು ನಟಿ ಆರುಧಂತಿ ನಾಗ್ ಸ್ಮರಿಸಿದರು.
ಇದನ್ನೂ ಓದಿ: ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ ಧರ್ಮಸ್ಥಳಕ್ಕೆ ಭೇಟಿ