ಬೆಂಗಳೂರು: ಬಾಣಸವಾಡಿ ಮುಖ್ಯರಸ್ತೆಯಲ್ಲಿ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರುತ್ವಿಕ್ ಮತ್ತು ಸುಮನ್ ಬಂಧಿತರು. ಮದನ್ ಅಲಿಯಾಸ್ ರಿಚರ್ಡ್ ಹತ್ಯೆಗೊಳಗಾದ ವ್ಯಕ್ತಿ. ಕೃತ್ಯಕ್ಕೆ ಸಹಕಾರ ನೀಡಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕೊಲೆಯಾದ ಮದನ್ ಹಾಗೂ ಆರೋಪಿಗಳು ಪರಿಚಯಸ್ಥರಾಗಿದ್ದು, ಚಿಕ್ಕಬಾಣಸವಾಡಿಯಲ್ಲಿ ನೆಲೆಸಿದ್ದರು. 2019ರಲ್ಲಿ ಮದನ್ ಹಾಗೂ ರುತ್ವಿಕ್ ನಡುವೆ ಗಲಾಟೆ ನಡೆದಿತ್ತು. ಕ್ರಿಕೆಟ್ ಬ್ಯಾಟ್ನಿಂದ ಮದನ್ ರುತ್ವಿಕ್ಗೆ ಹೊಡೆದಿದ್ದ. ಪರಿಣಾಮ 9 ದಿನ ಆಸ್ಪತ್ರೆಯಲ್ಲಿ ಕಳೆದಿದ್ದ ರುತ್ವಿಕ್ ಕೋಮಾ ಸ್ಥಿತಿಗೆ ತಲುಪಿದ್ದ. ಹಲ್ಲೆ ಬಳಿಕ ಮದನ್ ಬೆಂಗಳೂರು ತೊರೆದು ಚೆನ್ನೈಗೆ ತೆರಳಿದ್ದ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಮದನ್ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಾಲ್ಕು ವರ್ಷ ಚೆನ್ನೈನಲ್ಲೇ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ್ದ ಮದನ್ ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ವಾಪಸ್ ಆಗಿದ್ದ. ಮದನ್ ಬಂದಿರುವುದನ್ನು ಅರಿತಿದ್ದ ಆರೋಪಿಗಳು ಹಳೆ ದ್ವೇಷ ಮರೆತು ಮತ್ತೆ ಒಂದಾಗೋಣ ಎಂದು ಹೇಳಿ ಮಾತುಕತೆಗಾಗಿ ಅಕ್ಟೋಬರ್ 11ರ ಸಂಜೆ ಕರೆಸಿಕೊಂಡಿದ್ದರು. ಮಾತುಕತೆ ವೇಳೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿತ್ತು. ನೋಡ ನೋಡುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಆರೋಪಿಗಳು ಮುಂದಾಗಿದ್ದಾರೆ. ಈ ವೇಳೆ ಮದನ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ನಡುರಸ್ತೆಯಲ್ಲಿ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ.. ಕೊಲೆ
ಪೂರ್ವಸಂಚಿನಂತೆ ಹತ್ಯೆಗಾಗಿ ಬೈಕ್ನಲ್ಲಿ ಬಂದಿದ್ದ ಆರೋಪಿಗಳಿಗೆ ಆ ವೇಳೆ ಬೈಕ್ ಕೈ ಕೊಟ್ಟಿದೆ. ಕೂಡಲೇ ದಾರಿಯಲ್ಲಿದ್ದ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಎಂಬಾತನನ್ನು ಬೆದರಿಸಿ ಆತನ ಬೈಕ್ ತೆಗೆದುಕೊಂಡು, ಮದನ್ನನ್ನು ಚೇಸ್ ಮಾಡಿಕೊಂಡು ಹೋಗಿ ಕಟಿಂಗ್ ಶಾಪ್‌ವೊಂದರ ಬಳಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂರ್ವ ವಿಭಾಗ ಡಿಸಿಪಿ ದೇವರಾಜ್, "ಅಕ್ಟೋಬರ್ 11ರಂದು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದನ್ ಎಂಬಾತನ ಕೊಲೆ ನಡೆದಿತ್ತು. ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ರುತ್ವಿಕ್ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ಮಾಡಿ ಚೆನ್ನೈಗೆ ಎಸ್ಕೇಪ್ ಆಗಿದ್ದ ಮದನ್ ಒಂದು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ. ಎಲ್ಲಾ ಮರೆತು ಸ್ನೇಹಿತರಾಗೋಣ ಎಂದು ಮದನ್ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ ಆರೋಪಿಗಳು ಮಾತುಕತೆ ವೇಳೆ ಉಂಟಾದ ಜಗಳ ತಾರಕಕ್ಕೇರಿತ್ತು. ಈ ವೇಳೆ ಆರೋಪಿಗಳು ಕೊರಿಯರ್ ಬಾಯ್ನ ಬೈಕ್ ಕಸಿದು ಚೇಸ್ ಮಾಡಿ ಮದನ್ನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 4 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ: ವಿದೇಶದಿಂದ ಬರುತ್ತಿದ್ದಂತೆಯೇ ಬಂಧನ