ಬೆಂಗಳೂರು: ಸಹೋದರ ಸಂಬಂಧಿಯನ್ನು ಮಾರಕಾಸ್ತ್ರದಿಂದ ಹೊಡೆದು ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಚಂದ್ರಾ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಾಹಿದ್ ಅಹಮದ್ ಹಾಗೂ ಮತೀನ್ ಅಹಮದ್ ಬಂಧಿತ ಆರೋಪಿಗಳು. ನವೆಂಬರ್ 2ರಂದು ರಾತ್ರಿ ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಗಂಗೊಂಡನಹಳ್ಳಿ ಬಳಿ ಮುದಾಸೀರ್ ಖಾನ್ ಎಂಬಾತನ ಮೇಲೆ ಆರೋಪಿಗಳಿಬ್ಬರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.
ಘಟನೆಯ ವಿವರ: ಆರೋಪಿ ವಾಹಿದ್ ಅಹಮದ್, ಹತ್ಯೆಯಾದ ಮುದಾಸಿರ್ ಖಾನ್‌ನ ಸಹೋದರಿಯ ಮಗ. ಮುದಾಸೀರ್ ಮದುವೆಯಾಗಿದ್ದನ್ನು ಒಪ್ಪದ ವಾಹೀದ್ ಅಹಮದ್, 'ನಾನೇ ನಿನ್ನನ್ನು ಮದುವೆ ಆಗಬೇಕಿತ್ತು. ನಿನ್ನ ಗಂಡನನ್ನು ಕೊಂದಾದರೂ ಸರಿ ನಾನೇ ಮದುವೆಯಾಗುತ್ತೇನೆ' ಎಂದು ಆತನ ಪತ್ನಿಗೆ ಸಾಕಷ್ಟು ಬಾರಿ ಹೇಳಿದ್ದ. ವಾಹೀದ್ ಮಾತಿಗೆ ಮುದಾಸಿರ್ ಮತ್ತು ಆತನ ಪತ್ನಿ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ನಂತರ ಮುದಾಸೀರ್ ಪತ್ನಿ ಬಗ್ಗೆ ವಾಹಿದ್ ಸಂಬಂಧಿಕರು ಹಾಗೂ ಪರಿಚಯಸ್ಥರ ಬಳಿ ಕೆಟ್ಟದ್ದಾಗಿ ಮಾತನಾಡಲಾರಂಭಿಸಿದ್ದ. ಈ ಬಗ್ಗೆ ಅನೇಕ ಬಾರಿ ಜಗಳ ನಡೆದು ರಾಜಿ ಕೂಡ ಆಗಿತ್ತು.
ಆದರೆ, ಕಳೆದ ಗುರುವಾರ ಮುದಾಸಿರ್ ಪತ್ನಿಯ ಬಗ್ಗೆ ಕೆಟ್ಟದಾಗಿ ಆಕೆಯ ಸ್ನೇಹಿತೆಯ ಬಳಿ ವಾಹೀದ್ ಮಾತನಾಡಿದ್ದ. ಸ್ನೇಹಿತೆಯಿಂದ ಈ ವಿಚಾರ ತಿಳಿದ ಮುದಾಸಿರ್ ಪತ್ನಿ ತನ್ನ ಗಂಡನೊಂದಿಗೆ ಗಂಗೊಂಡನಹಳ್ಳಿಯಲ್ಲಿರುವ ಸ್ನೇಹಿತೆಯ ಮನೆಗೆ ತೆರಳಿದ್ದಳು. ಅಲ್ಲಿಯೇ ಇದ್ದ ವಾಹಿದ್ ಮತ್ತು ಆತನ ಸಹೋದರ ಮತೀನ್, ಮುದಾಸಿರ್ ದಂಪತಿ ಜೊತೆ ಜಗಳ ಆರಂಭಿಸಿದ್ದರು.
ಆಗಲೂ ಸಹ ''ನಿನ್ನ ಕೊಂದು ನಂತರ ನಿನ್ನ ಪತ್ನಿಯನ್ನು ಮದುವೆಯಾಗುತ್ತೇನೆ'' ಎಂದಿದ್ದ ವಾಹಿದ್ ತನ್ನ ಬಳಿ ಇದ್ದ ಮಾರಕಾಸ್ತ್ರವನ್ನು ಮುದಾಸೀರ್ನತ್ತ ಬೀಸಿದ್ದ. ಈ ವೇಳೆ ಮುದಾಸಿರ್ ಪತ್ನಿಗೆ ಗಾಯವಾಗಿತ್ತು. ನಂತರ ಸಹೋದರರಿಬ್ಬರು ಮುದಾಸಿರ್ನನ್ನು ತಳ್ಳಿ ನೆಲಕ್ಕೆ ಬೀಳಿಸಿ ಮಾರಕಾಸ್ತ್ರ ಹಾಗೂ ಮರದ ರೀಪ್ ಪೀಸ್ ನಿಂದ ಆತನ ಎದೆಗೆ ಹೊಡೆದು ಪರಾರಿಯಾಗಿದ್ದರು. ಗಾಯಗೊಂಡಿದ್ದ ಮುದಾಸೀರ್ನನ್ನು ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುದಾಸಿರ್ ಸಾವನ್ನಪ್ಪಿದ್ದನು.
ಘಟನೆ ಸಂಬಂಧ ಮುದಾಸಿರ್ ಪತ್ನಿಯಿಂದ ದೂರು ಪಡೆದ ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹೀದ್ ಅಹಮ್ಮದ್ ಹಾಗೂ ಆತನ ಸಹೋದರ ಮತೀನ್ ಅಹಮದ್ ನನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರಿಂದ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಕ್ರಮಕ್ಕೆ ಆಗ್ರಹಿಸಿದ ಶಾಸಕ