ಬೆಂಗಳೂರು: ಶ್ರೀಮಂತರನ್ನು ಟಾರ್ಗೆಟ್ ಮಾಡಿಕೊಂಡು ಹನಿಟ್ರ್ಯಾಪ್ ಹೆಸರಿನಲ್ಲಿ ಬಲೆ ಬೀಸಿ ಲಕ್ಷಾಂತರ ರೂಪಾಯಿ ವಸೂಲಿಗೆ ಮುಂದಾಗಿದ್ದ ಯುವತಿ ಸೇರಿದಂತೆ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಲಹಂಕ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಂದಿನಿ, ಪ್ರಜ್ವಲ್ ಮತ್ತು ಅನಿರುದ್ಧ ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಚಾಂದಿನಿ ಹಾಗೂ ಪ್ರಜ್ಚಲ್ ಇಬ್ಬರು ಪ್ರೇಮಿಗಳಾಗಿದ್ದರು. ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ತುಳಿದ ಪ್ರೇಮಿಗಳಿಗೆ, ಮತ್ತೊಬ್ಬ ಆರೋಪಿ ಅನಿರುದ್ಧ ಇವರಗಿ ಸಾಥ್ ನೀಡಿದ್ದ. ಈ ಮೂವರು ಜೊತೆ ಸೇರಿ ಹನಿಟ್ರ್ಯಾಪ್ ನಾಟಕವಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಶ್ರೀಮಂತರನ್ನು ಸೆಳೆಯಲು ಯುವತಿಯನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡುತ್ತಿದ್ದರು. ಕಳೆದ 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಚಾಂದಿನಿ ವೈದ್ಯರೊಬ್ಬರನ್ನ ಪರಿಚಯಿಸಿಕೊಂಡಿದ್ದಾಳೆ. ಪರಿಚಯ ಫೋನ್ ಕಾಲ್ ಮೂಲಕ ಕ್ರಮೇಣ ಸ್ನೇಹಕ್ಕೆ ತಿರುಗಿ ಪರಸ್ಪರ ಭೇಟಿಗೆ ಕಾರಣವಾಗಿತ್ತು. ಜೂ.13 ರಂದು ಯಲಹಂಕದ ಕೋಗಿಲು ಬಳಿ ಭೇಟಿಯಾಗಿದ್ದರು. ದೇವನಹಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಊಟ ಮಾಡಿದ್ದಾರೆ. ಅದೇ ದಿನ ಸಂಜೆ ವೈದ್ಯ ಯಲಹಂಕದಲ್ಲಿರುವ ಬಾಡಿಗೆ ಮನೆಗೆ ಗೆಳತಿಯನ್ನು ಕರೆತಂದಿದ್ದ. ಪೂರ್ವ ಸಂಚಿನಂತೆ ವೈದ್ಯನ ಮನೆಗೆ ಇಬ್ಬರು ಆರೋಪಿಗಳು ಪೊಲೀಸ್ ಹಾಗೂ ಮೀಡಿಯಾ ಸೋಗಿನಲ್ಲಿ ಎಂಟ್ರಿ ಕೊಟ್ಟಿದ್ದಾರೆ.
ಓದಿ:ಮದುವೆಯಾಗಿ ನಾಲ್ಕೇ ದಿನಕ್ಕೆ ಶಿವನ ಪಾದ ಸೇರಿದ ನವದಂಪತಿ!
ಡಾಕ್ಟ್ರೇ ಚಾಂದಿನಿ ಯಾರು..!? ಮದುವೆಯಾಗದ ಹೆಣ್ಣುಮಗಳನ್ನು ಮನೆಗೆ ಏಕೆ ಕರೆತಂದಿದ್ದೀರಿ..!? ನಾವು ಇಂಟೆಲಿಜೆನ್ಸ್ ಪೊಲೀಸರು. ಚಾಂದಿನಿ ಜೊತೆ ಕಳೆದಿರುವ ಫೋಟೋಗಳನ್ನು ರಹಸ್ಯವಾಗಿ ಸೆರೆ ಹಿಡಿದಿದ್ದೇವೆ. ಒಂದು ಕೋಟಿ ನೀಡಬೇಕು. ಇಲ್ಲದಿದ್ದರೆ ಕನಿಷ್ಠ 10 ಲಕ್ಷ ರೂಪಾಯಿ ಕೊಡಬೇಕು. ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಇದಕ್ಕೆ ಜಗ್ಗದ ವೈದ್ಯ ಪ್ರತಿರೋಧ ತೋರಿದ್ದಾನೆ. ಬಳಿಕ ಜೇಬಿನಲ್ಲಿದ್ದ 15 ಸಾವಿರ ರೂಪಾಯಿ ಹಣವನ್ನ ಆರೋಪಿಗಳು ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣಕ್ಕಾಗಿ ಒಂದು ಗುಂಪು ನನಗೆ ಬೆದರಿಕೆ ಹಾಕಿ 15 ಸಾವಿರ ಹಣ ಕಸಿದಿದ್ದಾರೆ ಎಂದು ಜೂ.14 ರಂದು ಯಲಹಂಕ ಪೊಲೀಸ್ ಠಾಣೆಯಲ್ಲಿ ವೈದ್ಯ ದೂರು ನೀಡಿದ್ದರು.
ಈ ಮೊದಲೇ ಬ್ಲಾಕ್ ಮೇಲ್ ಮಾಡಿದ್ದ ಆರೋಪಿ ಪ್ರಜ್ವಲ್ ಡಾಕ್ಟರ್ ವಿರುದ್ಧವೇ ದೂರು ನೀಡಲು ಠಾಣೆಗೆ ಬಂದು ಪೊಲೀಸರ ಬಳಿಯೇ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಸ್ವಲ್ಪ ಅನುಮಾನಗೊಂಡಿದ್ದ ಪೊಲೀಸರು ಪ್ರಜ್ವಲ್ ನನ್ನ ಪೊಲೀಸ್ ಶೈಲಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಪ್ರಿಯತಮೆ ಚಾಂದಿನಿ ಹಾಗೂ ಸಹಚರ ಅನಿರುದ್ಧ ಎಂಬುವವರನ್ನು ಯಲಹಂಕ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.