ಬೆಂಗಳೂರು: ಪೆಟ್ರೋಲ್ ಕಳ್ಳತನ ಮಾಡಲು ಬಂದು ವೃದ್ದೆಯ ಸರಗಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
23 ವರ್ಷದ ಗಜೇಂದ್ರ ಬಂಧಿತ. ಲಾಕ್ಡೌನ್ ಹಿನ್ನೆಲೆ ನಿರುದ್ಯೋಗಿಯಾಗಿದ್ದ ಈತ ಖರ್ಚಿಗೆ ಹಣ ಹೊಂದಿಸಲು ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದ. ಇದೇ ರೀತಿ ಕಳೆದ ತಿಂಗಳು 10ರಂದು ಮಧ್ಯರಾತ್ರಿ ಬಾಪೂಜಿ ನಗರದಲ್ಲಿರುವ ಲಿಂಗಮ್ಮ ಎಂಬುವರ ಮನೆಗೆ ನುಗ್ಗಿದ್ದ ಕಳ್ಳ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ನ ಪೆಟ್ರೋಲ್ ಕದಿಯಲು ಮುಂದಾಗಿದ್ದಾನೆ. ಈ ವೇಳೆ ಅನುಮಾನದಿಂದ ಮನೆಯಿಂದ ಲಿಂಗಮ್ಮ ಹೊರ ಬರುತ್ತಿದ್ದಂತೆ ಗಜೇಂದ್ರ ಅವಿತುಕೊಂಡಿದ್ದಾನೆ. ಬಳಿಕ ವೃದ್ದೆಯ ಕತ್ತಿನಲ್ಲಿ ಇದ್ದ ಚಿನ್ನದ ಸರ ಕಸಿದು ಕಾಲ್ಕಿತ್ತಿದ್ದಾನೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಬ್ಯಾಟರಾಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸರಗಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತನಿಂದ 40 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಹನುಮಂತನಗರ, ಜೆ.ಜೆ.ನಗರ, ಜ್ಞಾನ ಭಾರತಿ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.