ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಯವಸ್ಥಿತವಾಗಿ ಮಾದಕವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವಿದೇಶಿ ಪ್ರಜೆಗಳ ಸಹಿತ ಹನ್ನೊಂದು ಆರೋಪಿಗಳನ್ನು ಅಶೋಕನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸರ ತಂಡ ಹೆಡೆಮುರಿ ಕಟ್ಟಿದೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ಹರೂನ್, ಮೊಹಮ್ಮದ್ ಒರುವಿಲ್, ಮೊಹಮ್ಮದ್ ಇಲಿಯಾಸ್, ಅಬ್ಧುರ್ ಅಬು, ಅಹಮದ್ ಮೊಹಮ್ಮದ್ ಮೂಸಾ, ಮಾನ್ಶನ್ಶೀದ್, ಮೊಹಮ್ಮದ್ ಬಿಲಾಲ್, ಜಾನ್ ಪೌಲ್, ಜೋಸೆಫ್ ಬೆಂಜಮಿನ್ ಹಾಗೂ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಮಧ್ಯ ಆಫ್ರಿಕಾದ ಸುಡಾನ್, ಯೆಮನ್, ನೈಜೀರಿಯಾ ದೇಶಗಳಿಂದ ಉದ್ಯೋಗ ಮತ್ತು ಉನ್ನತ ಶಿಕ್ಷಣದ ಕಾರಣ ನೀಡಿ ವೀಸಾ ಪಡೆದು ಭಾರತಕ್ಕೆ ಬಂದಿದ್ದವರಾಗಿದ್ದಾರೆ. ಈ ಪೈಕಿ ಕೆಲವರು ವೀಸಾ ಅವಧಿ ಮುಗಿದ ಬಳಿಕವೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಲ್ಲೇ ವಾಸವಿದ್ದಾರೆ. ಈ ಮೂಲಕ ತಮ್ಮದೇ ಜಾಲ ರೂಪಿಸಿಕೊಂಡು ಹೈ ಎಂಡ್ ಮಾದಕ ಪದಾರ್ಥಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಇಲ್ಲಿನ ಮಾದಕ ವ್ಯಸನಿಗಳಿಗೆ ನಿರಂತರವಾಗಿ ಸರಬರಾಜು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
![arrest-of-drug-traffickers-in-bengaluru](https://etvbharatimages.akamaized.net/etvbharat/prod-images/16785035_thumb.png)
ಪ್ರಕರಣ ಸಂಬಂಧ ಮಾದಕ ವಸ್ತು ಗ್ರಾಹಕನನ್ನು ವಶಕ್ಕೆ ಪಡೆದಾಗ ಆತ ನೀಡಿದ ಮಾಹಿತಿ ಆಧರಿಸಿ ಕಬ್ಬನ್ ಪಾರ್ಕ್ ಉಪವಿಭಾಗದ ಪೊಲೀಸರ ತಂಡ ಕೇರಳ, ಮುಂಬೈ ಸೇರಿದಂತೆ ವಿವಿಧೆಡೆ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಗಾಂಜಾ, ಎಂಡಿಎಂಎ ಸೇರಿದಂತೆ ಬರೋಬ್ಬರಿ 1 ಕೋಟಿ 9 ಲಕ್ಷ ಮೌಲ್ಯದ ಮಾದಕ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಕಟರ್ ಬಳಸಿ ಎಟಿಎಂಯಲ್ಲಿದ್ದ 14 ಲಕ್ಷ ಲೂಟಿ