ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಚುನಾವಣಾ ಉಸ್ತುವಾರಿಗಳನ್ನು ಮಾತ್ರ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು ನಾಳೆ ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಿಂಬಾವಳಿ, ಸುಪ್ರೀಂ ಕೋರ್ಟ್ ತೀರ್ಪನ್ನು ಬಿಜೆಪಿ ಸ್ವಾಗತ ಮಾಡಲಿದೆ. ಹಿಂದಿನ ಸ್ಪೀಕರ್ ತೀರ್ಮಾನವನ್ನು ಕೋರ್ಟ್ ತಳ್ಳಿ ಹಾಕಿದ್ದು, ಅನರ್ಹರು ಕೇಂದ್ರದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾಳೆ 10 ಗಂಟೆಗೆ ಅನರ್ಹರು ಬಿಜೆಪಿ ಸೇರಲಿದ್ದು,ಎಲ್ಲ ಅನರ್ಹರೂ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲರನ್ನೂ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂದು ಕೋರ್ ಕಮಿಟಿ ಸಭೆ ತೀರ್ಮಾನ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೈ ಎಲೆಕ್ಷನ್ಗೆ ಅಭ್ಯರ್ಥಿಗಳು ಯಾರೆಂದು ಅಂತಿಮ ತೀರ್ಮಾನ ಮಾಡಿಲ್ಲ. ಆದರೆ ಉಪಚುನಾವಣೆಗಳಿಗೆ ಎಲ್ಲಾ ಕ್ಷೇತ್ರಗಳಿಗೆ ಉಸ್ತುವಾರಿಗಳ ಆಯ್ಕೆ ಮಾಡಿದ್ದೇವೆ ಎಂದರು. ಡಿಸಿಎಂ ಲಕ್ಷ್ಮಣ್ ಸವದಿಗೆ ಅಥಣಿ ಕ್ಷೇತ್ರದ ಟಿಕೆಟ್ ಇಲ್ಲ ಎನ್ನುವುದನ್ನು ಬಿಜೆಪಿ ಪಕ್ಕಾ ಮಾಡಿದ್ದು, ಸವದಿಗೆ ಉಪಚುನಾವಣೆ ಟಿಕೆಟ್ ಬದಲು ಅಥಣಿ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಲಾಗಿದೆ.