ಬೆಂಗಳೂರು: ಆರೋಗ್ಯ ಹಸ್ತ ಯೋಜನೆಗಾಗಿ 3 ಲಕ್ಷ ರೂಪಾಯಿ ಚೆಕ್ ಅನ್ನು ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಭಾನುವಾರ ಹಸ್ತಾಂತರಿಸಿದರು.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು. ಈ ಸಂಬಂಧ ಸುರಕ್ಷಾ ಹಾಗೂ ಪರೀಕ್ಷಾ ಕಿಟ್ಗಳನ್ನು ಎನ್ಎಸ್ಯುಐ ಕಾರ್ಯಕರ್ತರು ಸಿದ್ದಪಡಿಸುತ್ತಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆಯಾ ಜಿಲ್ಲೆ ಹಾಗೂ ತಾಲೂಕು ಮುಖಂಡರ ಮೂಲಕ ಕಳುಹಿಸಿಕೊಡುವ ಕೆಲಸ ಮಾಡಲಾಗುತ್ತದೆ. ಸರ್ಕಾರಕ್ಕೆ ಪರ್ಯಾಯವಾಗಿ ಕೋವಿಡ್ ವಿರುದ್ಧ ಜನರ ಪರವಾಗಿ ಹೋರಾಡುವ ಕಾರ್ಯ ಇದಾಗಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.
ಆರೋಗ್ಯ ಹಸ್ತ ಕಾರ್ಯಕ್ರಮ ಯಶಸ್ಸಿಗೆ ಪ್ರತಿ ಜಿಲ್ಲಾವಾರು ನಾಯಕರು ತಮ್ಮ ಕೈಲಾದ ಧನ ಸಹಾಯ ಮಾಡುತ್ತಿದ್ದಾರೆ. ನಾಯಕರಿಂದ ಸಂಗ್ರಹವಾಗುವ ಹಣವನ್ನು ಪಕ್ಷ, ಜನ ಸೇವೆಗೆ ಬಳಸಲಿದೆ. ಅದಕ್ಕಾಗಿಯೇ ಆರೋಗ್ಯ ಹಸ್ತ ಕಾರ್ಯಕ್ರಮ ಆರಂಭಿಸಿದ್ದು, ಇದೇ ವೇದಿಕೆ ಅಡಿ ಕಳೆದ ಕೆಲ ದಿನಗಳಿಂದ ಸೇವಾ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೆ ಇದಕ್ಕಾಗಿ ಪ್ರತ್ಯೇಕ ತಂಡ, ವೀಕ್ಷಣೆಗೆ ಸಮಿತಿಯನ್ನು ಕೂಡ ರಚಿಸಲಾಗಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ನುರಿತ ವೈದ್ಯರಿಂದ ತರಬೇತಿ ನೀಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಳಿಸಿದರು.
ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರರೆಡ್ಡಿ, ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಜಿಲ್ಲಾ ಕಿಸಾನ್ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.