ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯ ಅಭಿಮಾನಿಗಳ ಅಭಿಮಾನಕ್ಕೆ ಭಾವುಕರಾದರು. ಹಾವೇರಿ ಹುಲಿ ಎನ್ನುವ ಘೋಷಣೆ ಕೇಳಿ ಕೆಲ ಕ್ಷಣ ಮೂಖವಿಸ್ಮಿತರಾದರು. ಜತೆಗೆ ವೇದಿಕೆಯಲ್ಲಿನ ಪ್ರತ್ಯೇಕ ಆಸನವನ್ನು ತೆರವುಗೊಳಿಸಿ ಸಾಮಾನ್ಯ ಆಸನ ಹಾಕಿಸಿಕೊಳ್ಳುವ ಮೂಲಕ ಸರಳತೆ ಮೆರೆದರು.
ನಗರದ ಅರಮನೆ ಮೈದಾನದಲ್ಲಿ ಹಾವೇರಿ ಮತ್ತು ಉತ್ತರ ಕರ್ನಾಟಕದ ಭಾಗದಿಂದ ಆಗಮಿಸಿರುವ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗಾಗಿ ನೂತನ ಸಿಎಂ ಬೊಮ್ಮಾಯಿ ಕಾರ್ಯಕ್ರಮ ನಡೆಸಿ ಅಭಿಮಾನಿಗಳ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ವೇದಿಕೆಯಲ್ಲಿ ನೂತನ ಮುಖ್ಯಮಂತ್ರಿಗಳಿಗೆ ವಿಶೇಷ ಎತ್ತರದ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅದನ್ನು ನಿರಾಕರಿಸಿದ ಸಿಎಂ ಬೊಮ್ಮಾಯಿ ವಿಶೇಷ ಆಸನ ತೆಗೆಸಿ ಇತರ ಗಣ್ಯರಿಗೆ ವ್ಯವಸ್ಥೆ ಮಾಡಿದ್ದ ಆಸನವನ್ನೇ ಹಾಕಿಸಿಕೊಂಡು ಆಸೀನರಾದರು. ಇದು ನೂತನ ಮುಖ್ಯಮಂತ್ರಿಗಳ ಸರಳತೆ ಪ್ರತಿಬಿಂಬಿಸಿತು. ಬೊಮ್ಮಾಯಿ ಅವರ ಈ ಸರಳತೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ಮುಖ್ಯಮಂತ್ರಿಗಳಿಗೆ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ರಾಜಪ್ರಭುತ್ವದ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗಿರುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕದಂತಿರುತ್ತದೆ. ಆದರೆ, ಇಂದು ಬೊಮ್ಮಾಯಿ ಅವರು ಸಮಾನತೆಯ ಸಂಕೇತವಾಗಿ ಪ್ರತ್ಯೇಕ ಆಸನ ತೆರವುಗೊಳಿಸಿ ಗಮನ ಸೆಳೆದಿದ್ದಾರೆ. ಆರಂಭದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಹಿಡಿಯುವ ನಡೆ ಅನುಸರಿಸಿದ್ದಾರೆ.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಇಂದು ರಾಜಕೀಯವಾಗಿ, ಆಡಳಿತಾತ್ಮಕವಾಗಿ ರಾಜ್ಯ ಪ್ರಮುಖ ಘಟ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ಕೇವಲ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮಾತ್ರವಲ್ಲ, ನನಗೆ ಶಕ್ತಿ ತುಂಬಲು ಎಲ್ಲರೂ ಬಂದಿದ್ದೀರಿ.
ನಿಮ್ಮ ಬಸವರಾಜ ಬೊಮ್ಮಾಯಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಭಾರವನ್ನು ಹೊತ್ತಿದ್ದಾನೆ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಬಹಳ ದೊಡ್ಡ ಸವಾಲು ನನ್ನ ಮುಂದಿದೆ. ಬಡವರು, ಕೂಲಿ ಕಾರ್ಮಿಕರು, ಹಿಂದುಳಿದವರು, ದೀನದಲಿತರು ಎಲ್ಲರಿಗೂ ರಾಜ್ಯದ ಎಲ್ಲ ಭಾಗದ ಜನರಿಗೂ ನ್ಯಾಯ ಕೊಡಿಸಲು ಬದ್ಧನಾಗಿದ್ದೇನೆ. ಎಲ್ಲ ವಿಚಾರಗಳಲ್ಲೂ ಆಸಕ್ತಿ ವಹಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ನಾಡಿನ ಸಮಗ್ರ ಅಭಿವೃದ್ಧಿ ಮಾಡಲಿದ್ದೇನೆ ಎಂದು ಅಭಯ ನೀಡಿದರು.
ರಾಜ್ಯಕ್ಕೆ ಸಿಎಂ ಆದರೂ ನಿಮಗೆ ಮಾತ್ರ ಅದೇ ಬಸವರಾಜ : ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಜತೆಗೆ ಶಿಗ್ಗಾವಿ-ಸವಣೂರು ವಿಧಾನಸಭೆ ಕ್ಷೇತ್ರವನ್ನು ಅತ್ಯಂತ ಉನ್ನತ ಮಟ್ಟದ ಅಭಿವೃದ್ಧಿ ಮಾಡುವ ಸಂಕಲ್ಪ ತೊಡುತ್ತೇನೆ. ನನ್ನ ಕ್ಷೇತ್ರದ ಹೊರಗಡೆ ನಾನು ಬಸವರಾಜ ಬೊಮ್ಮಾಯಿ ಸಚಿವ ಎಂದು ಹೇಳುತ್ತಿದ್ದೆ. ಆದರೆ, ಕ್ಷೇತ್ರದ ಒಳಗೆ ಬಂದಾಗ ನಾನು ಕೇವಲ ಬಸವರಾಜ ಎನ್ನುತ್ತಿದ್ದೆ. ಈಗಲೂ ನಾನು ರಾಜ್ಯಕ್ಕೆ ಮುಖ್ಯಮಂತ್ರಿ ಆದರೂ ನಿಮಗೆ ಮಾತ್ರ ಅದೇ ಬಸವರಾಜ. ನಿಮಗಾಗಿ ಪ್ರತ್ಯೇಕ ಸಮಯ ನೀಡುತ್ತೇನೆ. ಪ್ರತ್ಯೇಕ ಸಮಾವೇಶ ಮಾಡೋಣ. ಈಗ ಕೊರೊನಾ ಕಾಲದಲ್ಲಿದ್ದೇವೆ. ಕೊರೊನಾ ನಿಯಮ ಪಾಲಿಸಿ ಎಂದು ಕರೆ ನೀಡಿದರು.
ಹಾವೇರಿ ಹುಲಿ : ಕಾರ್ಯಕ್ರಮದ ತುಂಬಾ ಹಾವೇರಿ ಹುಲಿ, ಹಾವೇರಿ ಹುಲಿ ಎಂಬ ಘೋಷಣೆ ಕೇಳಿ ಬಂತು. ಯಡಿಯೂರಪ್ಪ ರಾಜಾಹುಲಿ, ಬೊಮ್ಮಾಯಿ ಹಾವೇರಿ ಹುಲಿ ಎಂದು ಘೋಷಣೆ ಕೂಗಿ ಅಭಿಮಾನಿಗಳು ಅಭಿಮಾನ ಮೆರೆದರು.
ಇದನ್ನೂ ಓದಿ: ಲಿಂಗಾಯತ ಸಮುದಾಯವನ್ನ ದಂಡಿಯಾಗಿ ಸೆಳೆಯುವ ಕಾಂಗ್ರೆಸ್ ಯತ್ನಕ್ಕೆ ಬಿತ್ತೇ ಕಲ್ಲು!?