ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಲಸೆ ಸಮುದಾಯ ಕಂಗೆಟ್ಟು ಹೋಗಿದೆ. ವಲಸಿಗರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೋಡೆಲ್ ಅಧಿಕಾರಿಯನ್ನು ನೇಮಿಸಿದೆ. ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿದೆ.
21 ದಿನಗಳ ಲಾಕ್‌ಡೌನ್ ಆದೇಶ ತಂದ ಬಳಿಕ ಚಲನವಲನವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ ವಲಸಿಗರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಆತಂಕದಿಂದ ಲಭ್ಯವಿರುವ ಲಾರಿಗಳು, ಇನ್ನು ಕೆಲವರು ನಡೆದುಕೊಂಡೇ ತಮ್ಮ ಊರುಗಳಿಗೆ ವಾಪಾಸ್ ಹೋಗುತ್ತಿದ್ದಾರೆ. ಸರಿಯಾದ ವಸತಿ, ಆಹಾರ ವ್ಯವಸ್ಥೆ ಇಲ್ಲದೆ ವಲಸಿಗರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.
ಲಾಕ್ಡೌನ್ನಿಂದ ವಲಸಿಗರು ಬೃಹತ್ ಪ್ರಮಾಣದಲ್ಲಿ ತಮ್ಮ ತಮ್ಮ ಊರುಗಳಿಗೆ ಗುಳೆ ಹೋಗುತ್ತಿರುವುದನ್ನು ತಡೆಗಟ್ಟುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶನವನ್ನೂ ನೀಡಿತ್ತು.