ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆಗೆ ನಿಗದಿ ಮಾಡಲಾಗಿದ್ದ ಗಡುವನ್ನು ನವೆಂಬರ್ 21 ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಅರ್ಜಿ ಸಲ್ಲಿಕೆಗೆ ನವೆಂಬರ್ 15 ಕೊನೆಯ ದಿನವಾಗಿತ್ತು. ಆದರೆ, ಈ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯದ ಮೂಲೆ, ಮೂಲೆಗಳಿಂದ ಪಕ್ಷದವರು ಹಾಗೂ ಅನ್ಯ ಪಕ್ಷಗಳಿಂದ ಕಾಂಗ್ರೆಸ್ಗೆ ಬರಲು ಇಚ್ಚಿಸಿರುವ ಟಿಕೆಟ್ ಆಕಾಂಕ್ಷಿಗಳ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 5 ರಿಂದ 15 ರವರೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಪಡೆಯಲು ಹಾಗೂ ಭರ್ತಿ ಮಾಡಿದ ಅರ್ಜಿಯನ್ನು ಹಿಂದಿರುಗಿಸಲು ಅವಕಾಶ ನೀಡಲಾಗಿತ್ತು. ಹತ್ತು ದಿನದ ಅವಧಿ ಇಂದಿಗೆ ಮುಕ್ತಾಯವಾಗಿದ್ದು ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಸ್ವೀಕರಿಸಿದ್ದಾರೆ. ಆದರೆ, ಭರ್ತಿ ಮಾಡಿದ ಅರ್ಜಿಯನ್ನು ಅರ್ಧದಷ್ಟು ಜನ ಮಾತ್ರ ಸಲ್ಲಿಸಿದ್ದಾರೆ.
ಅರ್ಜಿ ಸಲ್ಲಿಕೆಗೆ ಕೆಲ ದಿನ ಕಾಲಾವಕಾಶ ನೀಡುವಂತೆ ಕೆಲವರು ಕೋರಿದ್ದಾರೆ. ಜೊತೆಗೆ ಅರ್ಜಿ ಪಡೆಯಲು ಸಾಕಷ್ಟು ಮಂದಿ ಉತ್ಸಾಹ ತೋರಿದ ಹಿನ್ನೆಲೆ ಇಂದು ಮುಕ್ತಾಯವಾಗಬೇಕಿದ್ದ ಗಡುವನ್ನು ನವೆಂಬರ್ 21ರ ವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಆಕಾಂಕ್ಷಿತರಿಂದ ಅರ್ಜಿ ಸಲ್ಲಿಕೆ, ಕೊನೆ ದಿನ ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿ...!