ಬೆಂಗಳೂರು : ಅತ್ಯಾಚಾರಿಗಳ ಕೈ ಕತ್ತರಿಸಿ ಎಂದು ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಜೆಎಂಎಫ್‌ಸಿ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ತಡೆ ಕೋರಿ ಮುತಾಲಿಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಮಂಗಳೂರಿನಲ್ಲಿ 2014ರ ನ 16ರಂದು ಆರ್ಯಸಮಾಜದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮುತಾಲಿಕ್, ಅತ್ಯಾಚಾರಿಗಳನ್ನು ಕೋರ್ಟ್ ಮತ್ತು ಪೊಲೀಸ್ ಠಾಣೆಗೆ ತೆಗೆದುಕೊಂಡು ಕರೆದುಕೊಂಡು ಹೇಗಿ ವಿಚಾರಣೆ ನಡೆಸುವ ಬದಲು, ಸಂತ್ರಸ್ಥೆ ಪಾಲಕರು ಅಥವಾ ಸಂಬಂಧಪಟ್ಟವರು ಆರೋಪಿಗಳ ಕೈ ಕಾಲುಗಳನ್ನು ಕತ್ತರಿಸಬೇಕು. ಇಂತಹ ಪ್ರಕರಣಗಳು ನಡೆದ ಸಂದರ್ಭ ಶ್ರೀರಾಮ ಸೇನೆಯ ವತಿಯಿಂದ ಕೋರ್ಟ್ ಪ್ರಕ್ರಿಯೆಯ ಸಂಪೂರ್ಣ ಖರ್ಚು ನೋಡಲಾಗುವುದು ಎಂಂಬ ವಿವಾದಿತ ಹೇಳಿಕೆ ನೀಡಿದ್ದರು.
ಈ ಹೇಳಿಕೆಯ ಹಿಂದೆ ಹಿಂಸೆಗೆ ದಾರಿ ಮಾಡಿಕೊಡುವ ಮತ್ತು ಸಮಾಜದ ಶಾಂತಿ ಕದಡುವ ಉದ್ದೇಶ ಇರುವುದರಿಂದ ಮಂಗಳೂರು ಪೂರ್ವ ವಿಭಾಗ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505(1)ಬಿ ಅಡಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಮುತಾಲಿಕ್ ಮಂಗಳೂರಿನ ಕೋರ್ಟ್‌ನಲ್ಲಿ 2014ರ ಡಿ.20 ರಂದು ಜಾಮೀನು ಪಡೆದಿದ್ದರು.
ಈಗ ಹೈಕೋರ್ಟ್ ಮೆಟ್ಟಿಲೇರಿರುವ ಮುತಾಲಿಕ್, ಮಂಗಳೂರು ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಹಾಗೂ ಪ್ರಕರಣ ರದ್ದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.