ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಂಡ-ಹೆಂಡತಿ ಒಂದೇ ಠಾಣೆಯಲ್ಲಿ ಕೆಲಸ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದರು.
ಕೋರಮಂಗಲ ಕೆಎಸ್ಆರ್ಪಿ ಮೈದಾನದಲ್ಲಿ ನಡೆದ ಪೊಲೀಸ್ ಕವಾಯತಿನಲ್ಲಿ ಅವರು ಭಾಗವಹಿಸಿದರು. ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನ ಸಲುವಾಗಿ ಗೌರವ ವಂದನೆ ಸಲ್ಲಿಸಿದರು. ಬಳಿಕ ಮಾತನಾಡಿದ ಸೂದ್, ಪೊಲೀಸರ ಕಲ್ಯಾಣಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪತಿ-ಪತ್ನಿ ಪೊಲೀಸರಾಗಿದ್ದರೆ ಒಂದೇ ಕಡೆ ಕಾರ್ಯನಿರ್ವಹಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಹಿಂದೆ ಒಂದೇ ಕಡೆ ಕೆಲಸ ಮಾಡುವ ಅವಕಾಶವಿತ್ತು. ಬಳಿಕ ನಾನಾ ಕಾರಣಗಳಿಂದ ಸ್ಥಗಿತವಾಗಿತ್ತು. ಹೀಗಾಗಿ ಮತ್ತೆ ಅನುಮತಿ ನೀಡಲು ಕೇಳಿದ್ದು, ಸರ್ಕಾರ ಮನವಿ ಪೂರೈಸುವ ಸಾಧ್ಯತೆಯಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಹಲವು ಪೊಲೀಸ್ ಸ್ಟೇಷನ್ಗಳನ್ನು ನಿರ್ಮಾಣ ಮಾಡಲಾಗಿದೆ. 10 ಸಾವಿರ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದರಲ್ಲಿ 2 ಸಾವಿರ ಮನೆಗಳ ನಿರ್ಮಾಣ ಕಾರ್ಯ ಮುಂದುವರೆದಿದೆ. ಈ ವರ್ಷ 116 ಪೊಲೀಸ್ ಠಾಣೆಗಳು ನಿರ್ಮಾಣ ಹಂತದಲ್ಲಿದೆ. ಯಾವ ಬಾರಿಯೂ ಇಷ್ಟರ ಮಟ್ಟಿಗೆ ಪೊಲೀಸ್ ಠಾಣೆ ನಿರ್ಮಾಣದ ಕಾರ್ಯ ನಡೆದಿರಲಿಲ್ಲ. 28 ಕೋಟಿ ರೂ ವೆಚ್ಚದಲ್ಲಿ ಪೊಲೀಸ್ ಜೀಪ್, ಮೋಟಾರ್ ಬೈಕ್ ಹಾಗೂ ಬಸ್ ಖರೀದಿ ಮಾಡಲಾಗಿದೆ ಎಂದು ಸೂದ್ ತಿಳಿಸಿದರು.
ಇನ್‌ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ ಸಂಬಂಧ ನಿನ್ನೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಅದರಂತೆ ನಾವು ತನಿಖೆ ಮಾಡುತ್ತಿದ್ದೇವೆ. ಇಲಾಖಾ ಮಟ್ಟದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮೇಲ್ಮನವಿ ಹಿಂಪಡೆಯುವ ಪ್ರಸ್ತಾವನೆಯಿಲ್ಲ: ಸ್ಪಷ್ಟನೆ ನೀಡಿದ ಡಿಜಿ ಪ್ರವೀಣ್ ಸೂದ್