ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ತೆರಿಗೆಯನ್ನು ಶೇ. 25ರಷ್ಟು ಹೆಚ್ಚಿಸುವ ಕುರಿತು ಈಗಾಗಲೇ ಚರ್ಚೆ ನಡೆಯುತ್ತಿರುವ ಹಿನ್ನೆಲೆ, ಹೆಚ್ಚಳ ಮಾಡಬಾರದೆಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್.ಆರ್., ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರು, ಆಸ್ತಿ ತೆರಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೈ ಬಿಡುವಂತೆ ಪಾಲಿಕೆಯ ಆಯುಕ್ತರಿಗೆ ಮತ್ತು ಆಡಳಿತಾಧಿಕಾರಿಗಳಿಗೆ ಕೂಡಲೇ ಆದೇಶಿಸುವುದಾಗಿ ತಿಳಿಸಿದ್ದಾರೆ ಎಂದು ರಮೇಶ್ ಎನ್.ಆರ್. ಹೇಳಿದ್ದಾರೆ.
ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಎಲ್ಲ ಅಪಾರ್ಟ್ಮೆಂಟ್ಗಳು, ಕೈಗಾರಿಕಾ ಕಟ್ಟಡಗಳು, ಮಾಲ್ಸ್, ಟೆಕ್ ಪಾರ್ಕ್, ಪಿಜಿ-ಹಾಸ್ಟೆಲ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಖಾಸಗಿ ಶಾಲಾ-ಕಾಲೇಜುಗಳು, ಕಲ್ಯಾಣ ಮಂಟಪ, ಪಾರ್ಟಿ ಹಾಲ್, ಸ್ಟಾರ್ ಹೋಟೆಲ್ ಮತ್ತು ಲಾಡ್ಜ್ಗಳ ನೈಜ ಒಟ್ಟು ನಿರ್ಮಿತ ಪ್ರದೇಶಗಳನ್ನು ವೈಜ್ಞಾನಿಕವಾಗಿ ಅಳತೆ ಹಾಕಿ ವಾಸ್ತವ ಆಸ್ತಿ ತೆರಿಗೆ ವಿಧಿಸಿದರೆ ವಾರ್ಷಿಕವಾಗಿ 7,000 ಕೋಟಿ ರೂ.ಗಳಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಬಹುದು ಎಂಬ ಮನವಿ ಪತ್ರ ಸಲ್ಲಿಸಿದ್ದಾರೆ.
ಹಾಗೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಮುಖ 04 ಇಲಾಖೆಗಳಾದ ನಗರ ಯೋಜನೆ ಇಲಾಖೆ, ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ, ಯೋಜನೆ (ಕೇಂದ್ರ) ಇಲಾಖೆ ಮತ್ತು ಬೃಹತ್ ಮಳೆನೀರುಗಾಲುವೆ ಇಲಾಖೆಗಳಲ್ಲಿ ಮಂಜೂರಾತಿ ಹುದ್ದೆಗಳಿಗಿಂತಲೂ 73 ಮಂದಿ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಇದಕ್ಕಾಗಿ ಪ್ರತಿ ತಿಂಗಳು ಸುಮಾರು 03 ಕೋಟಿ ರೂ.ಗಳಷ್ಟು ಹಣ ಪಾಲಿಕೆಗೆ ಹೊರೆಯಾಗುತ್ತಿದೆ. ಅಲ್ಲದೆ, ಪಾಲಿಕೆಯ 08 ವಲಯಗಳಲ್ಲಿ ಹಿಂದೆ ಇದ್ದ 08 ಮಂದಿ ಎಸಿಎಫ್ಗಳ ಜೊತೆಗೆ 08 ಮಂದಿ ಡಿಸಿಎಫ್ಗಳನ್ನು ಅನಾವಶ್ಯಕವಾಗಿ ನಿಯೋಜನೆ ಮಾಡಿರುವುದರಿಂದ ಪಾಲಿಕೆಗೆ ಪ್ರತಿ ತಿಂಗಳು 60 ಲಕ್ಷ ರೂ.ಗಳಿಗೂ ಹೆಚ್ಚು ಹಣ ಅನಾವಶ್ಯಕವಾಗಿ ವೆಚ್ಚವಾಗುತ್ತಿದೆ. ಈ ಅನವಶ್ಯಕ ಹುದ್ದೆಗಳಲ್ಲಿರುವ 81 ಮಂದಿ ಅಧಿಕಾರಿಗಳನ್ನು ಅವರವರ ಮಾತೃ ಇಲಾಖೆಗಳಿಗೆ ವಾಪಸ್ ಕಳುಹಿಸಿ ಸುಮಾರು 40 ಕೋಟಿ ರೂ. ವೆಚ್ಚಗಳನ್ನು ಉಳಿತಾಯ ಮಾಡುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.