ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಈ ಬಾರಿ ರಾಜ್ಯ ಬಜೆಟ್‍ನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಎಸ್‍ಸಿ ಮೋರ್ಚಾ ಮನವಿ ಮಾಡಿದೆ.
ಮೋರ್ಚಾದ ರಾಜ್ಯ ಅಧ್ಯಕ್ಷರ ಚಲವಾದಿ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಶಾಸಕರ ಭವನದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆ ನಡೆಸಲಾಯಿತು. ಕೆಐಎಡಿಬಿ ಸಬ್ಸಿಡಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶೇಕಡಾ 50 ರಿಂದ ಶೇಕಡಾ 75 ಕ್ಕೆ ಹೆಚ್ಚಿಸಿದ ಬಗ್ಗೆ ಸಭೆಯಲ್ಲಿ ಅಭಿನಂದಿಸಲಾಯಿತು. ಹಾಗೂ ಮುಂಬರುವ ರಾಜ್ಯ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಹೆಚ್ಚಿನ ಅನುದಾನಗಳನ್ನು ಒದಗಿಸಲು ಮನವಿ ಮಾಡಲಾಯಿತು.
ಎಸ್‍ಸಿಎಸ್‍ಪಿ/ ಎಸ್‍ಟಿಪಿ ವಿಭಾಗದಡಿ ಮೀಸಲಿಟ್ಟ ಹಣದಲ್ಲಿ ಶೇಕಡಾ 43 ಮಾತ್ರ ಖರ್ಚಾಗಿದ್ದು, ಉಳಿಕೆ ಶೇಕಡಾ 57 ರಷ್ಟು ಹಣ ಸರ್ಕಾರಕ್ಕೆ ವಾಪಸ್ ಹೋಗಿರುವ ಕುರಿತು ಸಭೆಯಲ್ಲಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲು ಮತ್ತು ಅನುದಾನ ಸದ್ಬಳಕೆ ಕುರಿತು ಮುಖ್ಯಮಂತ್ರಿಗಳಿಗೆ ಸಲಹೆ ನೀಡುವ ಕುರಿತು ಚರ್ಚಿಸಲಾಯಿತು. ಎಸ್‍ಸಿಎಸ್‍ಪಿ/ ಎಸ್‍ಟಿಪಿ ಅನುದಾನ ಬಳಕೆಗೆ ತೊಡಕಾಗಿರುವ 7 ಡಿ ಕಾಯ್ದೆಯನ್ನು ರದ್ದುಪಡಿಸಲು ಸಭೆಯು ಮನವಿ ಮಾಡಿತು.
ಓದಿ: ಸಚಿವ ಶ್ರೀಮಂತ ಪಾಟೀಲ್ ನಿವಾಸದ ಎದುರು ಉದ್ಯೋಗಾಕಾಂಕ್ಷಿಗಳ ಅಹೋರಾತ್ರಿ ಧರಣಿ
ವಿದ್ಯಾರ್ಥಿವೇತನವನ್ನು ಹೆಚ್ಚಿಸಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಮನವಿ ಮಾಡಿದೆ. ಎಲ್ಲ ಎಸ್‍ಸಿ ಗುತ್ತಿಗೆದಾರರಿಗೆ ಗುತ್ತಿಗೆ ಇಎಂಡಿ 50 ಲಕ್ಷ ಇರುವುದನ್ನು ಒಂದು ಕೋಟಿಗೆ ಹೆಚ್ಚಿಸಬೇಕೆಂದು ಮನವಿ ಮಾಡಲಾಯಿತು.
ಸಭೆಯಲ್ಲಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಪಕ್ಷದ ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಬಾಬುರಾವ್ ಮುಡಬಿ, ಕೆಪಿಎಸ್ಸಿ ಮಾಜಿ ಸದಸ್ಯ ಡಾ. ಮಹಾದೇವ್, ವಿಶ್ರಾಂತ ಉಪ ಕುಲಪತಿ ಒ. ಅನಂತರಾಮಯ್ಯ, ದಲಿತ ಉದ್ದಿಮೆದಾರರ ಸಂಘದ ಗೌರವಾಧ್ಯಕ್ಷ ಶ್ರೀನಿವಾಸನ್, ಎಸ್‍ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಬೆಟ್ಟಹಳ್ಳಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.