ಬೆಂಗಳೂರು: ಸರ್ಕಾರದ ಛಾಟಿಗೆ ಬಗ್ಗಿದ ತಂತ್ರಾಂಶ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳು ಕೊನೆಗೂ ತಮ್ಮ ಆಟೋ ಸೇವಾ ದರಗಳನ್ನು ಇಳಿಕೆ ಮಾಡಿವೆ. ಕರ್ನಾಟಕ ಸರ್ಕಾರವು ತಮ್ಮ ಸೇವೆಯನ್ನು ನಿಲ್ಲಿಸುವಂತೆ ಆದೇಶಿಸಿದ್ದರೂ, ಅಗ್ರಿಗೇಟರ್ಗಳು ಆಟೋರಿಕ್ಷಾಗಳು ಕನಿಷ್ಠ ದರವನ್ನು ಇಳಿಸಿ ತಮ್ಮ ಸೇವೆಯನ್ನು ಮುಂದುವರೆಸಿವೆ.
ನಿಯಮ ಉಲ್ಲಂಘಿಸಿಲ್ಲ : ಹೆಚ್ಚುವರಿ ದರ ವಿಧಿಸಿ ನಿಯಮ ಉಲ್ಲಂಘಿಸಿರುವ ಆರೋಪವನ್ನು ರಾಪಿಡೊ, ಓಲಾ, ಉಬರ್ ಕಂಪನಿಗಳು ತಳ್ಳಿ ಹಾಕಿವೆ. ಇದೀಗ ಸಾರಿಗೆ ಇಲಾಖೆ ನೋಟಿಸ್ ನೀಡಿದ ಬಳಿಕ ದರಗಳನ್ನು ಕಡಿತಗೊಳಿಸಿವೆ. ಮೂಲ ದರವಾದ 30 ರೂ ಮತ್ತು ನಂತರದ ಪ್ರತೀ ಕಿಮೀಗೆ ರೂ 15 ಎಂದು ವಿಧಿಸಲು ಪ್ರಾರಂಭಿಸಿವೆ.
ಮೆಟ್ರೋ ನಿಲ್ದಾಣಗಳಲ್ಲಿ ಪ್ರಿ-ಪೇಯ್ಡ್ ಆಟೋ ಸ್ಟ್ಯಾಂಡ್ ಕುರಿತ ಸ್ಪಷ್ಟನೆ : ಬೆಂಗಳೂರಿನ 10 ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿ-ಪೇಯ್ಡ್ ಆಟೋ ಸ್ಟ್ಯಾಂಡ್ ಕುರಿತು ಅಗ್ರಿಗೇಟರ್ ಆಟೋರಿಕ್ಷಾ ಸೇವೆಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದ್ದು ಎಲ್ಲದರ ಕುರಿತು ಪರಿಶೀಲಿಸಿ ಸೋಮವಾರ ಅಗ್ರಿಗೇಟರ್ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸಲಾಗಿದೆ ಎಂದಿದೆ.
ಸಾರ್ವಜನಿಕರಿಗೆ ಕೊಂಚ ರಿಲೀಫ್ : ಒಂದು ಕಾಲದಲ್ಲಿ ಜನಸ್ನೇಹಿ ಅಂತಾ ಕರೆಸಿಕೊಳ್ಳುತ್ತಿದ್ದ ಆಟೋಗಳು ಸದ್ಯ ಜನರಿಂದ ವಸೂಲಿಗೆ ಇಳಿದಿರುವುದು ವಿಪರ್ಯಾಸವಾಗಿದೆ. ಈ ರೀತಿ ಅನಧಿಕೃತ ಸಂಚಾರ ವ್ಯವಸ್ಥೆಗಳ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿರುವುದು ಸಾರ್ವಜನಿಕರಿಗೆ ಕೊಂಚ ಸಮಾಧಾನ ತಂದಿದೆ.
ಇದನ್ನೂ ಓದಿ : ಆ್ಯಪ್ ಆಧರಿತ ಸೇವೆಗೆ ಚಾಲನೆ ನೀಡಲು ಬೆಂಗಳೂರು ಮಹಾನಗರ ಆಟೋ ಚಾಲಕರ ಒಕ್ಕೂಟದ ನಿರ್ಧಾರ