ಬೆಂಗಳೂರು: 612 ಕೋಟಿ ರೂ.ಮೊತ್ತದ ನಿಧಿಯನ್ನು ಬಳಸಿಕೊಂಡು ಬೆಂಗಳೂರು ವ್ಯಾಪ್ತಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ನಿಗಾ ವ್ಯವಸ್ಥೆ ರೂಪಿಸುವ ಯೋಜನೆಗೂ ಮಸಿ ಬಳಿದ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಡೆಗೆ ನಾಚಿಕೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದರು.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮಾಡಿದ ಮೊಟ್ಟ ಮೊದಲ ಕೆಲಸ ಎಂದರೆ ನಿರ್ಭಯಾ ನಿಧಿ ಬಳಸಿಕೊಂಡು ಪ್ರಮುಖ ಸ್ಥಳಗಳಲ್ಲಿ ಮೊದಲ ಹಂತದಲ್ಲಿ ಸುಮಾರು 1.4 ಲಕ್ಷ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ದೆಹಲಿಯಲ್ಲಿ ಅಳವಡಿಸಿರುವ ಅತ್ಯುತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾ ಬೆಲೆ 40 ಸಾವಿರ, ಆದರೆ ನಮ್ಮಲ್ಲಿ 8 ಲಕ್ಷ, ಏನಿದರ ಮರ್ಮ ಎಂದು ಪ್ರಶ್ನಿಸಿದರು.
ಅತ್ಯುತ್ತಮ ಸರ್ಕಾರಿ ಸಂಸ್ಥೆ ಬಿಇಎಲ್ ದೆಹಲಿಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡಿದ್ದು, 1.4 ಲಕ್ಷ ಕ್ಯಾಮೆರಾಗಳಿಗೆ ಖರ್ಚಾಗಿರುವುದು 572 ಕೋಟಿ, ಬೆಂಗಳೂರಿನಲ್ಲಿ ಅಳವಡಿಸುತ್ತಿರುವ ಕೇವಲ 7,500 ಕ್ಯಾಮೆರಾಗಳಿಗೆ ಏಕೆ 619 ಕೋಟಿ ಎಂದು ಪ್ರಶ್ನಿಸಿದರು.
ಹಗರಣದ ವಿರುದ್ಧ ಮಾತನಾಡಿದ ಐಪಿಎಸ್ ಅಧಿಕಾರಿ ರೂಪ ಹಾಗೂ ಈ ಅಕ್ರಮದ ಆರೋಪ ಹೊತ್ತಿರುವ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರ ಈ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ, ಆದ ಕಾರಣ ಸೂಕ್ತ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದರು.
ಈ ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಶನಿವಾರ ಬೆಳಗ್ಗೆ 11 ಗಂಟೆಗೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೋಹನ್ ದಾಸರಿ ಮಾಹಿತಿ ನೀಡಿದರು.
ಇದನ್ನೂ ಓದಿ: ಪಕ್ಷದ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದೆ ಹೋಗೋಣ: ದೇವೇಗೌಡ