ಬೆಂಗಳೂರು: 10 ವರ್ಷಗಳಿಂದ ಮೂಲೆ ಸೇರಿದ್ದ ವಕ್ಫ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ವರದಿಯನ್ನು ವಿಧಾನ ಪರಿಷತ್ನಲ್ಲಿ ಇಂದು ಮಂಡಿಸಲಾಯಿತು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಿಕೆ ಮಾಡಲಾಯಿತು.
ವಿಧಾನ ಪರಿಷತ್ನಲ್ಲಿ ಧನವಿನಿಯೋಗ ವಿಧೇಯಕಕ್ಕೆ ಅಂಗೀಕಾರ ಸಿಕ್ಕ ನಂತರ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಅನ್ವರ್ ಮಾಣಿಪ್ಪಾಡಿ ವರದಿ ಮಂಡನೆ ಮಾಡಿದರು. 29 ಸಾವಿರ ಎಕರೆ ವಕ್ಫ್ ಆಸ್ತಿ ಕಬಳಿಕೆ ಆಗಿದೆ. 2-3 ಲಕ್ಷ ಕೋಟಿ ಮೌಲ್ಯದ ಹಗರಣ ನಡೆದಿದೆ ಎಂದು ಹೇಳಲಾಗಿತ್ತು. ಹಾಗಾಗಿ 2012ರಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಸಿದ್ದಪಡಿಸಿದ್ದ ವರದಿಯನ್ನು ಸದನದ ಮೂಲಕ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ರವಿಕುಮಾರ್, ವರದಿಯಲ್ಲಿ ಜಮೀರ್ ಅಹಮದ್, ಖಮರುಲ್ ಇಸ್ಲಾಂ, ನಜೀರ್ ಅಹಮದ್ ಇತ್ಯಾದಿ ಕಾಂಗ್ರೆಸ್ ನಾಯಕರ ಹೆಸರಿದೆ. ಈ ಬಗ್ಗೆ ಚರ್ಚೆಯಾಗಬೇಕು ಎಂದರು. ಇದಕ್ಕೆ ಕಿಡಿಕಾರಿದ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಚರ್ಚೆಗೆ ಅವಕಾಶ ನೀಡಿ ಎಲ್ಲವನ್ನೂ ಚರ್ಚೆ ಮಾಡೋಣ ಎಂದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ಸದಸ್ಯರು ಬೇಕಿದ್ದರೆ ಇಡಿ, ಸಿಬಿಐ ತನಿಖೆಗೆ ಕೊಡಿ ಎಂದು ಸವಾಲು ಹಾಕಿದರು. ಈ ವೇಳೆ ಸದನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಗದ್ದಲದ ವಾತಾವರಣ ಸೃಷ್ಟಿಯಾಯಿತು ನಂತರ ಸಭಾಪತಿಗಳು ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಯಿತು.
ಇದನ್ನೂ ಓದಿ: ರಾಜ್ಯ ವಕ್ಫ್ ಬೋರ್ಡ್‌ನ 2.5 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ ಅವ್ಯವಹಾರ: ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ