ಬೆಂಗಳೂರು: ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಎಂದು ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ಬಂಧನಕ್ಕೆ ಒಳಗಾದ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಂತೆ ಕೈಗೊಂಡ ನಿರ್ಣಯ ವಿಚಾರವಾಗಿ ಮೈಸೂರು ವಕೀಲರ ಸಂಘಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಸಂಘದ ನಿರ್ಣಯ ಪ್ರಶ್ನಿಸಿ ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಮೈಸೂರು ಜಿಲ್ಲಾ ವಕೀಲರ ಸಂಘಕ್ಕೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.
ಅಲ್ಲದೆ, ಆರೋಪಿ ಪರ ಯಾವುದೇ ವಕೀಲ ವಕಲಾತ್ತು ವಹಿಸಬಾರದು ಎಂದು ನಿರ್ಣಯ ತೆಗೆದುಕೊಳ್ಳುವುದು ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಆರೋಪಿ ವಿದ್ಯಾರ್ಥಿನಿ ಪರ ವಕಾಲತ್ತು ವಹಿಸಬಾರದು ಎಂದು ನಿರ್ಣಯ ತೆಗೆದುಕೊಂಡಿದ್ದರೆ ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮೈಸೂರು ಜಿಲ್ಲಾ ವಕೀಲರ ಸಂಘಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜ. 19ಕ್ಕೆ ಮುಂದೂಡಿತು.
ಇದನ್ನೂ ಓದಿ : ಫ್ರೀ ಕಾಶ್ಮೀರ್ ಪೋಸ್ಟರ್ ಪ್ರದರ್ಶನ ಪ್ರಕರಣ: ಯುವತಿಗೆ ಮಾ.5ರ ವರೆಗೆ ನ್ಯಾಯಾಂಗ ಬಂಧನ
ಇದಕ್ಕೂ ಮುನ್ನ ಅರ್ಜಿದಾರ ವಕೀಲ ವಾದಿಸಿ, ಮೈಸೂರು ವಿವಿ ಆವರಣದಲ್ಲಿ 2020ರ ಜ. 8ರಂದು ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ‘ಫ್ರೀ ಕಾಶ್ಮೀರ್’ ಭಿತ್ತಿಪತ್ರ ಪ್ರದರ್ಶಿಸಿದ ಸಂಬಂಧ ನಳಿನಿ ಬಾಲಕುಮಾರ್ ಎಂಬ ವಿದ್ಯಾರ್ಥಿನಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ನಳಿನಿ ವಿರುದ್ಧ ಯಾರೊಬ್ಬರೂ ವಕಾಲತ್ತು ವಹಿಸಬಾರದು ಎಂದು ಜ. 16ರಂದು ಮೈಸೂರು ಜಿಲ್ಲಾ ವಕೀಲರ ಸಂಘ ನಿರ್ಣಯ ಕೈಗೊಂಡಿದೆ. ವಕಾಲತ್ತು ವಹಿಸಲು ಮುಂದಾದ ಕೆಲ ವಕೀಲರನ್ನು ಸಂಘದಿಂದ ಅಮಾನತುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್‌ಗೆ ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.