ಬೆಂಗಳೂರು: ತಮ್ಮ ವಿರುದ್ಧ ರೌಡಿಪಟ್ಟಿ ತೆರೆದಿರುವುದಕ್ಕೆ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡುವವರೆಗೂ ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಹಿಂದೂ ಪರ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಯತ್ನದ ಆರೋಪದಡಿ ಉಪ್ಪಾರಪೇಟೆ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಸರ್ಕಾರದ ವಿರುದ್ಧ ನಗರದ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದ ಪುನೀತ್ ಕೆರೆಹಳ್ಳಿ, ತನ್ನ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ರೌಡಿಪಟ್ಟಿ ತೆರೆಯಲಾಗಿದೆ. ಸರ್ಕಾರ ಇದಕ್ಕೆ ಸೂಕ್ತ ಕಾರಣ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಗೂಂಡಾ ಕಾಯ್ದೆಯಡಿ ದೂರು: 2013ರಿಂದ 2023ರ ವರೆಗೆ ಪುನೀತ್ ಕೆರೆಹಳ್ಳಿ ವಿರುದ್ಧ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಪದೇ ಪದೇ ಭಾಗಿಯಾಗಿರುವ ಆರೋಪದಲ್ಲಿ ಕ್ರಿಮಿನಲ್ ಪ್ರಕರಣಗಳಿದ್ದವು. ಈ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಕೇಸು ದಾಖಲಿಸಿದ್ದರು. ಇದೀಗ ಉಪವಾಸದಿಂದ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅನ್ನ, ನೀರು ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ಪುನೀತ್ ಕೆರೆಹಳ್ಳಿ, "ನನ್ನ ಪ್ರಾಣ ಹೋಗಲಿ, ಸರ್ಕಾರ ಸ್ಪಷ್ಟೀಕರಣ ನೀಡುವವರೆಗೆ ಹಾಗೆ ಇರುತ್ತೇನೆ" ಎಂದಿದ್ದಾರೆ. ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯದೇ ಹಠ ಮಾಡುತ್ತಿರುವ ಅವರ ವಿರುದ್ಧ ಆತ್ಮಹತ್ಯೆ ಯತ್ನದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ವೈರಲ್ ವಿಚಾರ: ಉಪವಾಸ ಸತ್ಯಾಗ್ರಹದ ವೇಳೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪುನೀತ್ ಕೆರೆಹಳ್ಳಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ತನ್ನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದ ಪುತ್ತೂರು ಪುತ್ತಿಲ ಪರಿವಾರದ ಸ್ಥಾಪಕ ಅರುಣ ಕುಮಾರ್ ಪುತ್ತಿಲ್ ಅವರ ನಿಯೋಗದೊಂದಿಗೆ ಮಾತನಾಡುತ್ತಿದ್ದಾಗ ಪುನೀತ್ ಕೆರೆಹಳ್ಳಿ, ಕಾಂಗ್ರೆಸ್ ಸರ್ಕಾರದ ಯಾವುದಾದರೂ ಪ್ರತಿನಿಧಿ ಭೇಟಿಯಾಗಿ ನನ್ನ ಮನವಿ ಸ್ವೀಕರಿಸಬೇಕು. ಬರದೇ ಇದ್ದರೆ ಬಸ್ಸಿಗೆ ಬೆಂಕಿ ಹಾಕುತ್ತೇನೆ, ವಿಧಾನಸೌಧಕ್ಕೆ ಕಲ್ಲು ಎಸೆಯುತ್ತೇನೆ ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂಓದಿ: ಶಿವಮೊಗ್ಗ: ಮನೆಯಲ್ಲಿ ಪತಿ, ಪತ್ನಿ, ಮಗ ಸಜೀವ ದಹನ; ಆತ್ಮಹತ್ಯೆ ಶಂಕೆ