ಬೆಂಗಳೂರು: ನಗರದಲ್ಲಿ ಕೊರೊನಾ ಮಹಾಮಾರಿಗೆ 54 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಎದೆನೋವು ಎಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜ್ಞಾನಭಾರತಿ ವಾರ್ಡ್ನ ಈ ವ್ಯಕ್ತಿ, ಕೊರೊನಾ ವೈರಸ್ನಿಂದಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಈ ವ್ಯಕ್ತಿ ನಿನ್ನೆ ರಾತ್ರಿ ಮೃತಪಟ್ಟಿದ್ದು, ಅಧಿಕಾರಿಗಳು ಇಂದು ಬೆಳಗ್ಗೆ ದೃಢಪಡಿಸಿದ್ದಾರೆ. ಮೃತ ವ್ಯಕ್ತಿಗೆ ಹೃದಯ ಸಂಬಂಧಿ ಕಾಯಿಲೆಯೂ ಇತ್ತು ಎನ್ನಲಾಗುತ್ತಿದೆ. ಆದರೆ, ಇವರಿಗೆ ಹೇಗೆ ಕೋವಿಡ್-19 ತಗುಲಿತು ಎಂಬುದನ್ನು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.
ಪಾದರಾಯನಪುರದ ಪ್ರಕರಣ:
ಇನ್ನು ಪಾದರಾಯನಪುರದಲ್ಲಿ ಮತ್ತೆ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿದೆ. ಕಂಟೇನ್ಮೆಂಟ್ ವಲಯದ P-608ರ ಸಂಪರ್ಕದಿಂದ ಇಂದು ಮೂವರಿಗೆ ಕೊರೊನಾ ದೃಢಪಟ್ಟಿದೆ. ಇವರೆಲ್ಲರನ್ನೂ ಹೋಟೆಲ್ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದು ಮನೆಗೆ ಕಳುಹಿಸುವ ವೇಳೆ ಮತ್ತೆ ತಪಾಸಣೆ ಮಾಡಿದಾಗ ಕೊರೊನಾ ದೃಢಪಟ್ಟಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, 78 ವರ್ಷದ ವೃದ್ಧನೂ ಸೇರಿದಂತೆ ಮೂವರಲ್ಲಿಯೂ ಯಾವುದೇ ರೋಗ ಲಕ್ಷಣ ಇರಲಿಲ್ಲ ಎಂದು ಪಾದರಾಯನಪುರದ ಆರೋಗ್ಯ ಅಧಿಕಾರಿ ಮನೋರಂಜನ್ ಹೆಗಡೆ ತಿಳಿಸಿದರು.
ಇನ್ನು ಮಂಗಮ್ಮನಪಾಳ್ಯದ ರ್ಯಾಂಡಮ್ ತಪಾಸಣೆ ವೇಳೆ 20 ವರ್ಷದ (P-1306) ಮಹಿಳೆಯ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಇನ್ನೊಂದೆಡೆ ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಕೆ.ಜಿ ಹಳ್ಳಿಯ ನಿವಾಸಿ 32 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ಒಟ್ಟು ಆರು ಕೊರೊನಾ ಪ್ರಕರಣ
- P-1268 ಮಹಿಳೆ 54 ವರ್ಷ - P-608 ಸಂಪರ್ಕ
- P-1269 ಪುರುಷ 78 ವರ್ಷ- P-608 ಸಂಪರ್ಕ
- P-1294 25 ವರ್ಷದ ಮಹಿಳೆ - P-608 ಸಂಪರ್ಕ
- P-1270 ಪುರುಷ 32 ವರ್ಷ - ರೋಗಲಕ್ಷಣದಿಂದ ದಾಖಲು
- P-1306 20 ವರ್ಷದ ಮಹಿಳೆ - ಕಂಟೇನ್ಮೆಂಟ್ ಝೋನ್
- P-1364 54 ವರ್ಷದ ಪುರುಷ - ರೋಗ ಪತ್ತೆ ಹಚ್ಚಲಾಗುತ್ತಿದೆ (ಮರಣ)