ಬೆಂಗಳೂರು: ಕಳೆದ ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಬಹುಮಹಡಿ ಕಟ್ಟಡವೊಂದು ವಾಲಿಕೊಂಡು ಅತಂಕ ಸೃಷ್ಟಿಸಿದ್ದ ಘಟನೆ ಮಾಸುವ ಮುನ್ನವೆ ಇಂದು ಹೊರಮಾವು ವಾರ್ಡ್ನಲ್ಲಿ ಎರಡು ಅಂತಸ್ತಿನ ಕಟ್ಟಡ ವಾಲಿಕೊಂಡು ಸ್ಥಳಿಯರನ್ನು ಅತಂಕ್ಕೀಡು ಮಾಡಿದೆ.
ಹೊರಮಾವು ರೈಲ್ವೆ ಅಂಡರ್ ಪಾಸ್ ಬಳಿ ಇರುವ ಈ ಕಟ್ಟಡ ಲಾಲ್ ಸಿಂಗ್ ಎಂಬುವರಿಗೆ ಸೇರಿದ್ದಾಗಿದೆ. ಅರ್ಧ ಸೈಟ್ ನಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಜ್ಯೂವೆಲರಿ ಅಂಗಡಿ ಸೇರಿದಂತೆ ಮೂರು ಮನೆಗಳಿವೆ. ಪಕ್ಕದ ಸೈಟ್ ನಲ್ಲಿ ಕುಮರೇಶ್ ಎಂಬುವರು ಮನೆ ನಿರ್ಮಿಸಲು ಅಗೆದಿದ್ದ ಮಣ್ಣು ಕುಸಿತದಿಂದ ಕಟ್ಟಡ ವಾಲಿಕೊಂಡಿದೆ ಎನ್ನಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಟ್ಟಡದಲ್ಲಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಿದ್ದು, ಅಗ್ನಿಶಾಮಕ ಹಾಗೂ ಬಿಬಿಎಂಪಿ ಸಿಬ್ಬಂದಿ ಕಟ್ಟಡ ತೆರವು ಕಾರ್ಯ ಕೈಗೊಂಡಿದ್ದಾರೆ. ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.