ಬೆಂಗಳೂರು: ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದು, ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನ ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ (ಶನಿವಾರ) ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿರುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶುಕ್ರವಾರ ಕರಾವಳಿಯಲ್ಲಿ ಹಲವು ಸ್ಥಳಗಳಲ್ಲಿ, ಉತ್ತರ ಒಳನಾಡಿನ ಕೆಲವೆಡೆ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ಅತಿ ಹೆಚ್ಚು 7 ಸೆಂ.ಮೀ ಮತ್ತು ಚಿಂಚೋಳಿ, ಸುಲೇಪೇಟದಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕದ್ರಾದಲ್ಲಿ, ಕಲಬುರ್ಗಿ ಜಿಲ್ಲೆಯ ಚಿತ್ತಾಪುರ, ಯಾದಗಿರಿ ಜಿಲ್ಲೆಯ ಸೈದಾಪುರ, ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ತಲಾ 3 ಸೆಂ.ಮೀ ಮಳೆ ಬಿದ್ದಿದೆ. ಉಳಿದಂತೆ ಕಾರವಾರ, ಕಲಬುರ್ಗಿ ಜಿಲ್ಲೆ ಮುಧೋಳ, ಜೇವರ್ಗಿ, ಶಹಾಪುರ (ಯಾದಗಿರಿ ಜಿಲ್ಲೆ), ಬೆಂಗಳೂರು ನಗರ, ಕುಣಿಗಲ್ (ತುಮಕೂರು ಜಿಲ್ಲೆ) ತಲಾ 2. ಕ್ಯಾಸಲ್ ರಾಕ್, ಗೇರ್ಸೊಪ್ಪ (ಎರಡೂ ಉತ್ತರ ಕನ್ನಡ ಜಿಲ್ಲೆ), ಆಳಂದ, ನೆಲೋಗಿ, ಅಡಕಿ, ಯಡ್ರಾಮಿ, ಗುಂಡಗುರ್ತಿ ( ಕಲಬುರ್ಗಿ ಜಿಲ್ಲೆ), ಕಟ್ಕೋಲ್ (ಬೆಳಗಾವಿ ಜಿಲ್ಲೆ), ದೇವದುರ್ಗ (ರಾಯಚೂರು ಜಿಲ್ಲೆ) , ಧಾರವಾಡ, ಕುಂದಗೋಳ (ಧಾರವಾಡ ಜಿಲ್ಲೆ) ಬೀದರ್, ಔರಾದ್ (ಬೀದರ್ ಜಿಲ್ಲೆ), ದೇವರಹಿಪ್ಪರಗಿ(ವಿಜಯಪುರ ಜಿಲ್ಲೆ), ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ), ಪೊನ್ನಂಪೇಟೆ (ಕೊಡಗು ಜಿಲ್ಲೆ), ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಗುಡುಗು ಸಹಿತ ಮಳೆ: ಮುಂದಿನ 2 ದಿನ ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಷಿಯಸ್ ಇರಲಿದೆ ಎಂದು ಹೇಳಿದೆ.
ಇದನ್ನೂ ಓದಿ: ಕೈಕೊಟ್ಟ ಮುಂಗಾರು ಬೆಳೆ ಹಾನಿ: ರೈತರ ನೆರವಿಗೆ ಧಾವಿಸಿದ ಸಚಿವ ಸತೀಶ ಜಾರಕಿಹೊಳಿ.. ಮೋಡ ಬಿತ್ತನೆಗೆ ಸಿದ್ಧತೆ