ಬೆಂಗಳೂರು: ಸಂಪುಟ ವಿಸ್ತರಣೆಗೆ ಮುಂದಾಗಿರುವ ಸಿಎಂ ಯಡಿಯೂರಪ್ಪಗೆ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳ ತಲೆನೋವು ಮುಂದುವರೆದಿದ್ದು, ಇಂದು ಮತ್ತೊಬ್ಬ ಶಾಸಕರಿಂದ ಅಸಮಾಧಾನ ಬಹಿರಂಗಗೊಂಡಿದೆ. ಕಾಲಾಯ ತಸ್ಮೈ ನಮಹಃ ಎಂದು ಟ್ವೀಟ್ ಮಾಡಿ ಶಾಸಕ ಆನಂದ ಮಾಮನಿ ಬೇಸರ ವ್ಯಕ್ತಪಡಿಸಿದ್ದಾರೆ.
ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ನಾದರೂ ನನ್ನ ಕ್ಷೇತ್ರ ಹಾಗೂ ನಮ್ಮಂಥವರನ್ನು ಬೆಳೆಸಿರಿ. ಈಗಾಗಲೇ ಸಾಕಷ್ಟು ಬಾರಿ ಸರ್ಕಾರದಲ್ಲಿ ಅಧಿಕಾರ ಅನುಭವಿಸಿದವರು ಇದ್ದಾರೆ. ಅವರು ತಾವು ಪಡೆದ ಸ್ಥಾನಮಾನ ತ್ಯಜಿಸಲು ಹಿಂದೇಟು ಹಾಕುತ್ತಿರುವುದು ಒಂದೆಡೆಯಾದರೆ, ಪಕ್ಷದ ಮುಖಂಡರು ಇತ್ತ ಆಸಕ್ತಿ ತೋರದಿರುವುದು ಮತ್ತೊಂದೆಡೆ. ಈ ನಿಟ್ಟಿನಲ್ಲಿ ನಾಯಕರು ಯಾವುದೇ ಆಸಕ್ತಿ ತೋರಿಸದಿರುವುದು ಬೇಸರ, ಇನ್ಮೇಲೆ ಪಕ್ಷ ನಿಷ್ಠರಿಗೆ ಕಾಲವಿಲ್ಲವೇ ಎಂಬುದು ಯಕ್ಷಪ್ರಶ್ನೆಯಾಗಿದೆ. ಇದು ಪಕ್ಷ ನಿಷ್ಠರಿಗೆ ಹಾಗೂ ಮತದಾರರಿಗೆ ಆದ ಘೋರ ಅಪಮಾನ ಎಂದು ಟ್ವೀಟ್ ಮಾಡಿದ್ದಾರೆ.
ಹೊಸದಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಪಕ್ಷ ಕಟ್ಟಿ ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕೆ ಇಲ್ಲ. ಪಕ್ಷದ ಮೇಲಿಟ್ಟಿರುವ ಕ್ಷೇತ್ರದ ಜನತೆಯ ಅಮೂಲ್ಯ ಪ್ರೀತಿ, ಅಭಿಮಾನಕ್ಕೂ ಪಕ್ಷದಲ್ಲಿ ಬೆಲೆ ಇಲ್ಲವಾ? ಆಟಕ್ಕುಂಟು ಲೆಕ್ಕಕ್ಕಿಲ್ಲ, ಇದೇನು ವಿಪರ್ಯಾಸವೇ? ಕಟು ಸತ್ಯವೇ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಮುಂದಿನ ನಡೆ ಬಗ್ಗೆ ಚಿಂತನೆ ನಡೆಸಬೇಕು ಎನ್ನುವ ಮೂಲಕ ಪಕ್ಷ ತೊರೆಯುವ ಚಿಂತನೆ ಇದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.