ಬೆಂಗಳೂರು: ನಗರದಲ್ಲಿ ನಿನ್ನೆ ಒಂದೇ ದಿನ 137 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಪರಿಣಾಮ ಸುಮನಹಳ್ಳಿ ಚಿತಾಗಾರ ಮುಂದೆ ಆ್ಯಂಬುಲೆನ್ಸ್ ಕ್ಯೂ ಮುಂದುವರೆದಿದೆ.
ಬೆಳಗಿನಿಂದ 14 ಆ್ಯಂಬುಲೆನ್ಸ್ಗಳು ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ ಶವಗಳನ್ನು ಹೊತ್ತು ನಿಂತಿವೆ. ನಿನ್ನೆ 25 ಮಂದಿ ಕೊವಿಡ್ ಮೃತದೇಹಗಳ ದಹನ ಈ ಒಂದೇ ಚಿತಾಗಾರದಲ್ಲಿ ನಡೆದಿದೆ. ರಾತ್ರಿ 12 ಗಂಟೆವರೆಗೂ ದಹನ ಕಾರ್ಯ ಮಾಡಿರುವ ಚಿತಾಗಾರ ಸಿಬ್ಬಂದಿ, ಹೆಚ್ಚಿನ ಕ್ಯೂ ಹಿನ್ನೆಲೆ 8 ಗಂಟೆಯಿಂದಲೇ ದಹನ ಕಾರ್ಯ ಪ್ರಾರಂಭಿಸಿದ್ದಾರೆ.
ಬೆಳಗಿನಿಂದ ದಹನ ಕಾರ್ಯ ಆರಂಭಿಸಿರುವ ಸಿಬ್ಬಂದಿ, ಕೋವಿಡ್ ಪ್ರೋಟೋಕಾಲ್ ಹಾಗೂ ಕೂಲಿಂಗ್ ನಡೆಸಿ ಬೆಳಗ್ಗೆ 10ರವರೆಗೆ 2 ಶವಗಳನ್ನ ದಹನ ಮಾಡಿದ್ದರು. ಚಿತಾಗಾರದ ಮುಂದೆ ಮೃತರ ಕುಟುಂಬಸ್ಥರು ಮೃತ ವ್ಯಕ್ತಿಗಳ ಅಂತ್ಯ ಸಂಸ್ಕಾರಕ್ಕಾಗಿ ಬೀಡು ಬಿಟ್ಟಿದ್ದಾರೆ.
ಇತ್ತೀಚಿನ ಮಾಹಿತಿ ಪ್ರಕಾರ 12 ಗಂಟೆಯವರೆಗೆ ಒಟ್ಟು 19 ಮೃತದೇಹಗಳು ಬಂದಿದ್ದು, ಈ ಪೈಕಿ 6 ಮೃತದೇಹಗಳನ್ನ ದಹನ ಮಾಡಿದ್ದಾರೆ ಎನ್ನಲಾಗಿದೆ.
ಓದಿ: ಆಸ್ಪತ್ರೆ ಹೊರಗೆ ಸೋಂಕಿತರನ್ನು ಕರೆತಂದ ಆ್ಯಂಬುಲೆನ್ಸ್ಗಳ ಸಾಲು- ವಿಡಿಯೋ