ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರ ದೇಹವನ್ನು ನೋಡಲು ಸಂಬಂಧಿಕರು ಇಚ್ಛಿಸಿದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ಮಾಡಿಕೊಡಬೇಕು. ಆದರೆ ಆ ವೇಳೆ ಮೃತದೇಹವನ್ನು ಮುಟ್ಟುವುದಕ್ಕೆ ಬಿಡಕೂಡದು ಎಂದು ಹೈಕೋರ್ಟ್ ಸೂಚಿಸಿದೆ.
ವಕೀಲ ಅಮೃತೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರಕ್ಕೆ ಈ ಸೂಚನೆ ನೀಡಿದೆ. ಜುಲೈ 27ರಂದು ನಡೆದಿದ್ದ ವಿಚಾರಣೆ ವೇಳೆ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಗೌರಯುತವಾಗಿ ನಡೆಸಲು ಸೂಚಿಸಿದ್ದ ಹೈಕೋರ್ಟ್, ಈ ಕುರಿತು ಎಸ್ಒಪಿ ರೂಪಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಿತ್ತು. ಹಾಗೆಯೇ ಸೋಂಕಿನಿಂದ ಮೃತಪಟ್ಟವರ ದೇಹವನ್ನ ಮುಟ್ಟುವುದರಿಂದ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದಾದರೂ ವೈಜ್ಞಾನಿಕ ಆಧಾರಗಳಿವೆಯೇ? ಕೊರೊನಾ ಸೋಂಕಿಲ್ಲದೆ ಬೇರೆ ಕಾರಣಗಳಿಂದಾಗಿ ಮೃತಪಟ್ಟವರ ಮರಣ ಪ್ರಮಾಣ ಪತ್ರದಲ್ಲಿ ಕೋವಿಡ್ ವಿವರಗಳನ್ನು ದಾಖಲಿಸುವ ಅಗತ್ಯವೇನು ಎಂದು ಪ್ರಶ್ನಿಸಿತ್ತು.
ಈ ಹಿನ್ನೆಲೆ ಸರ್ಕಾರದ ಪರ ವಕೀಲರು ಜುಲೈ 30ರಂದು ಹೈಕೋರ್ಟ್ಗೆ ಸ್ಪಷ್ಟನೆ ನೀಡಿದ್ದು, ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರದಲ್ಲಿ ಕೋವಿಡ್ ಸಂಬಂಧಿತ ವಿವರಗಳನ್ನು ದಾಖಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಮೃತ ವ್ಯಕ್ತಿಯ ಗೌರವಯುತ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಚೌಕಟ್ಟಿನೊಳಗೆ ನಡೆಸುವ ಸಂಬಂಧ ಸರ್ಕಾರ ಯಾವುದೇ ಮಾರ್ಗಸೂಚಿ ನೀಡಿಲ್ಲ. ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನ್ಯಾಯಾಲಯಕ್ಕಿದೆ ಎಂದಿದೆ.