ಬೆಂಗಳೂರು: ಮಾಜಿ ಸಚಿವ ಸಿ.ಎಚ್. ವಿಜಯ್ ಶಂಕರ್ ಅವರಿಗೆ ಜಿ-ಕೆಟಗಿರಿ ಕೋಟಾದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 2006ರಲ್ಲಿ ಮಂಜೂರು ಮಾಡಿದ್ದ ನಿವೇಶನವನ್ನು ಉಳಿಸಿಕೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ. ತನಗೆ ಮಂಜೂರು ಮಾಡಿದ್ದ ನಿವೇಶನವನ್ನು ಮರು ಮಂಜೂರು ಕೋರಿ 2022ರಲ್ಲಿ ವಿಜಯ್ ಶಂಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೆಂದರ್ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಪುರಸ್ಕರಿಸಿದೆ.
ಅಲ್ಲದೇ, ರಾಜ್ಯ ಸರ್ಕಾರ ಬಿಡಿಎ ನಿಯಮ 10(ಬಿಡಿಎಯ ನಿವೇಶನಗಳ ಹಂಚಿಕೆ)ಕ್ಕೆ ತಿದ್ದುಪಡಿ ಮಾಡಿದೆ. ಹೀಗಾಗಿ ಅರ್ಜಿದಾರ ವಿಜಯ್ ಕುಮಾರ್ ಅನರ್ಹರಾಗುವುದಿಲ್ಲ ಎಂದು ತಿಳಿಸಿದೆ. ಜೊತೆಗೆ ಈ ನಿಯಮಕ್ಕೆ ಸರ್ಕಾರ ಪೂರ್ವಾನ್ವಯ ಆಗುವಂತೆ ತಿದ್ದುಪಡಿ ಮಾಡಿದೆ. ಆದ್ದರಿಂದ ಅನರ್ಹತೆ ಈ ಪ್ರಕರಣಕ್ಕೆ ಅನ್ವಯ ಆಗುವುದಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ವಿಜಯ ಶಂಕರ್ ಅವರಿಗೆ 2006ರ ಅಕ್ಟೋಬರ್ 9ರಂದು ಎಚ್‌ಎಸ್‌ಆರ್ ಬಡಾವಣೆಯ ಸೆಕ್ಟರ್ 3ರ ಸರ್ವೆ ನಂಬರ್ 89ರ ಬಿ ಅಡಿ ಜಿ- ಕೆಟಗರಿ ನಿವೇಶನ ಮಂಜೂರಾಗಿತ್ತು. ಈ ನಿವೇಶನ 2007ರ ಜನವರಿ 24ರಂದು ಲೀಸ್ ಕಂ ಸೇಲ್ ಡೀಡ್ ನಡೆದಿತ್ತು. ಆದರೆ, 2010ರಲ್ಲಿ ಜಿ ಕೆಟಗರಿ ಸೈಟ್ ಅನ್ನು ರಾಜ್ಯ ಸರ್ಕಾರ ಮತ್ತು ಬಿಡಿಎ ಕಾನೂನು ಬಾಹಿರವಾಗಿ ಹಂಚುತ್ತಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ ಜಿ ಕೆಟಗರಿ ಅಡಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ನಿವೇಶನಗಳನ್ನು ಕಾನೂನು ಬಾಹಿರ ಎಂದು ಘೋಷಣೆ ಮಾಡಿ 2012ರಲ್ಲಿ ಆದೇಶಿಸಿತ್ತು.
ಈ ನಡುವೆ ಹೈಕೋರ್ಟ್ ಆದೇಶದ ಅನುಸಾರ ಜಿ ಕೆಟಗರಿ ಅಡಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳ ವಿಚಾರಣೆಗೆ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ವಿಜಯ್ ಶಂಕರ್ ಅವರು ಜಿ ಕೆಟಗರಿ ನಿವೇಶನ ಪಡೆಯಲು ಅರ್ಹರಲ್ಲ ಎಂದು ತಿಳಿಸಿ ಅವರಿಗೆ ನೀಡಿದ್ದ ನಿವೇಶನವನ್ನು ಹಿಂಪಡೆಯುವಂತೆ ಬಿಡಿಎಗೆ ಶಿಫಾರಸ್ಸು ಮಾಡಿತ್ತು. ಆದರೆ, 2022ರ ಏಪ್ರಿಲ್‌ನಲ್ಲಿ ಬಿಡಿಎಯ ನಿಯಮ 10ಕ್ಕೆ ತಿದ್ದುಪಡಿ ಮಾಡಿದ್ದ ರಾಜ್ಯ ಸರ್ಕಾರ 2005ರ ಡಿಸೆಂಬರ್ 14ರ ಬಳಿಕದ ಜಿ ಕೆಟಗರಿ ನಿವೇಶನ ಹಂಚಿಕೆಯನ್ನು ನಿಯಮ ಬದ್ದಗೊಳಿಸಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ನಿವೇಶನವನ್ನು ಮರು ಹಂಚಿಕೆ ಕೋರಿ ವಿಜಯ್ ಶಂಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಹೈಕೋರ್ಟ್ ಆವರಣದಲ್ಲಿ 10 ಮಹಡಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಪ್ರಸ್ತಾವನೆ