ಬೆಂಗಳೂರು: ಸಚಿವ ಜಿ.ಟಿ. ದೇವೇಗೌಡರ ಹೇಳಿಕೆ ಗೊಂದಲ ಹಾಗೂ ದ್ವಂದ್ವದಿಂದ ಕೂಡಿದೆ. ಮೈತ್ರಿ ಪಾಲುದಾರರಾಗಿ ಅವರು ಈ ರೀತಿ ಹೇಳಬಾರದಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲೂ ಮೊದಲೇ ಎಲ್ಲರನ್ನೂ ಕರೆಸಿ ಮಾತನಾಡಿದ್ರೆ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದಿತ್ತು ಅಂತ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಶೇ.80 ಸರಿಯಾಗಿದೆ, ಆದರೆ ಶೇ.20 ಸರಿಯಾಗಿಲ್ಲ. ಇದೂ ಆಗಿದ್ದರೆ ಒಟ್ಟು 24-25 ಸೀಟು ಗೆಲ್ಲುವ ಸಾಧ್ಯತೆ ಇತ್ತು. ಮೈಸೂರು, ಕೋಲಾರ ಹಾಗೂ ಮಂಡ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದ್ದು ನಿಜ. ಬೆಂಗಳೂರು ಉತ್ತರ, ಚಿತ್ರದುರ್ಗ, ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು ಸೇರಿದಂತೆ ಉಳಿದ ಕ್ಷೇತ್ರಗಳಲ್ಲಿ ಮೈತ್ರಿ ಯಶಸ್ವಿಯಾಗಿದೆ. ಚುನಾವಣಾ ಫಲಿತಾಂಶ ನೋಡಿ, ಬಿಜೆಪಿಗಿಂತ ರಾಜ್ಯದಲ್ಲಿ ಮೈತ್ರಿ ಪಕ್ಷಗಳೇ ಹೆಚ್ಚು ಸ್ಥಾನ ಗೆಲ್ಲಲಿವೆ ಎಂದರು.
ನಮ್ಮ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಕೊನೆ ಗಳಿಗೆಯಲ್ಲಿ ಆಗಿಲ್ಲ. ಮೊದಲೇ ತೀರ್ಮಾನ ಆಗಿತ್ತು. ಮೈಸೂರು-ಕೊಡಗು ಕ್ಷೇತ್ರ ಕಾಂಗ್ರೆಸ್ಗೆ ಅನ್ನೋದು ಕೂಡ ಮೊದಲೇ ತೀರ್ಮಾನ ಆಗಿತ್ತು. ಮೈತ್ರಿ ಪಾಲುದಾರರಾಗಿ ಮೈಸೂರು ವಿಚಾರವಾಗಿ ಜಿಟಿಡಿ ಈ ರೀತಿಯ ಹೇಳಿಕೆ ಕೊಡಬಾರದಿತ್ತು. ಪ್ರಾಮಾಣಿಕತೆಯಿಂದ ಕೆಲಸ ಮಾಡಿಲ್ಲ ಎಂಬುದು ಜಿ ಟಿ ದೇವೇಗೌಡರ ಮಾತಿನಿಂದ ತಿಳಿದುಬರುತ್ತಿದೆ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಕುಂದಗೋಳ ಬಂಡಾಯ
ಕುಂದಗೋಳದಲ್ಲಿ ಬಂಡಾಯ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವಿಚಾರ ಕುರಿತು ಮಾತನಾಡಿ, ಬಂಡಾಯ ಎಲ್ಲವೂ ಸರಿಹೋಗುತ್ತೆ. ನಾಮಪತ್ರ ವಾಪಸ್ ಪಡೆಯಲು ಇವತ್ತೇ ಕೊನೆ ದಿನ. ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಕುಂದಗೋಳ ಉಪ ಚುನಾವಣೆ ಉಸ್ತುವಾರಿ ವಿಚಾರದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ನಾವು ಅಧಿಕೃತವಾಗಿ ಉಸ್ತುವಾರಿ ನೀಡಿದ್ದೇ ನಿನ್ನೆ. ಊಹಾಪೋಹಗಳಿಗೆಲ್ಲ ಉತ್ತರ ಕೊಡೋದಕ್ಕೆ ಆಗೋದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದರು.
ಜಮೀರ್ ಬಗ್ಗೆ ಸಮರ್ಥನೆ
ಇನ್ನು ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ಸಮರ್ಥಿಸಿಕೊಂಡ ದಿನೇಶ್ ಗುಂಡೂರಾವ್, ಮಂಡ್ಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ರೆ ಮತ್ತಷ್ಟು ಉತ್ತಮ ರೀತಿಯಲ್ಲಿ ಫಲಿತಾಂಶ ನಿರೀಕ್ಷಿಸಬಹುದಿತ್ತು. ಮಂಡ್ಯ ಉಪ ಚುನಾವಣೆ ಮಾದರಿ ಯಶಸ್ವಿಯಾಗಿ ಮಾಡಿಕೊಳ್ಳಬಹುದಿತ್ತು. ಜಮೀರ್ ಹೇಳಿಕೆಯಲ್ಲಿ ತಪ್ಪೇನಿಲ್ಲ. ಇನ್ನೂ ಚೆನ್ನಾಗಿ ಒಟ್ಟಾಗಿ ಕೆಲಸ ಮಾಡಬಹುದಿತ್ತು. ಆದರೂ ನಮಗೆ ಉತ್ತಮ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗರು ರಾಹುಲ್ ಗಾಂಧಿ ಅವರ ಪೌರತ್ವ ವಿಚಾರವನ್ನು ಈಗ ಕೆದುಕುತ್ತಿದ್ದಾರೆ. ಇಷ್ಟೊಂದು ಕೀಳುಮಟ್ಟದ ರಾಜಕಾರಣವನ್ನ ಜನ ನೋಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ. ಬಿಜೆಪಿಯವರು ಬೀಗುತ್ತಿದ್ದಾರೆ. ಯಡಿಯೂರಪ್ಪ ಅವರ ಕನಸು ನನಸಾಗಲ್ಲ. ಹೇಗಾದರೂ ಮಾಡಿ ಸಿಎಂ ಆಗುವ ಅವರ ಆಸೆ ಯಶಸ್ವಿಯಾಗಲ್ಲ ಎಂದು ದಿನೇಶ್ ಕುಟುಕಿದರು.