ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಜಾತಿ ನಿಂದನೆ ಮಾಡಿರುವ ಆರೋಪದಡಿ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ನೀಡಿರುವ ದೂರಿನನ್ವಯ ನಗರದ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೂರಿನ ಸಾರಾಂಶ: ಹಿಂದೂಪರ ಕಾರ್ಯಕರ್ತರಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಇತ್ತೀಚೆಗೆ ರೌಡಿಪಟ್ಟಿ ತೆರೆದು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್ ಆಧರಿಸಿ ಮಾಧ್ಯಮಗಳಲ್ಲಿ ವರದಿಯಾದದ್ದನ್ನು ಭೈರಪ್ಪ ಹರೀಶ್ ಕುಮಾರ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಬಿಡುಗಡೆಯಾದ ಬಳಿಕ ತಮ್ಮ ವಿರುದ್ಧ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪುನೀತ್ ಕೆರೆಹಳ್ಳಿ, ತಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ.
ಇದನ್ನೂ ಓದಿ: ಉಪವಾಸ ಆತ್ಮಹತ್ಯೆ ಯತ್ನವಲ್ಲ, ಗಾಂಧೀಜಿ ಹಾಕಿಕೊಟ್ಟ ಹೋರಾಟದ ಹಾದಿ: ಮಾಜಿ ಸಚಿವ ಸುರೇಶ್ ಕುಮಾರ್
ಅಕ್ಟೋಬರ್ 17 ಹಾಗೂ 18ರಂದು ತನ್ನ ಫೇಸ್‌ಬುಕ್ ಖಾತೆಯಲ್ಲಿ ವಿವಿಧ ಪೋಸ್ಟ್ ಪ್ರಕಟಿಸಿರುವ ಪುನೀತ್ ಕೆರೆಹಳ್ಳಿ, ತಮ್ಮ ವಿರುದ್ಧ ಅವಾಚ್ಯವಾಗಿ ನಿಂದಿಸಿ, ತಮ್ಮ ಕುಟುಂಬ ಹಾಗೂ ಮಕ್ಕಳನ್ನು ಉದ್ದೇಶಿಸಿ ತಲೆ ಎತ್ತಿಕೊಂಡು ಸಮಾಜದಲ್ಲಿ ತಿರುಗಾಡದಂತೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ದಲಿತ ಸಮುದಾಯದವರಾದ ತಮ್ಮನ್ನು ಉದ್ದೇಶಿಸಿ ಜಾತಿನಿಂದನೆ ಮಾಡಲಾಗಿದೆ ಎಂದು ಭೈರಪ್ಪ ಹರೀಶ್ ಕುಮಾರ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ದೂರಿನನ್ವಯ ಪುನೀತ್ ಕೆರೆಹಳ್ಳಿ ವಿರುದ್ಧ ಜಾತಿ ನಿಂದನೆ, ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪದಡಿ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆ ರದ್ದು: ಕಳೆದ ಆಗಸ್ಟ್ 11ರಂದು ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಗೂಂಡಾ ಕಾಯ್ದೆಗೆ ಸಂಬಂಧಿಸಿಂತೆ ರಚಿಸಲಾಗಿದ್ದ ಸಲಹಾ ಮಂಡಳಿಯು ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ ಎಂದು ವರದಿ ನೀಡಿತ್ತು. ಹೀಗಾಗಿ ಪುನೀತ್ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆ ರದ್ದುಪಡಿಸಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಚಾಮರಾಜಪೇಟೆ, ರಾಮನಗರ ಹಾಗೂ ವಿಜಯನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪುನೀತ್ ವಿರುದ್ಧ ಗಲಭೆ, ದೊಂಬಿ, ಕೊಲೆ ಬೆದರಿಕೆ ಹಾಗೂ ಹಲ್ಲೆ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಶೀಟ್ ತೆರೆದಿದ್ದರು.
ಇದನ್ನೂ ಓದಿ: ಆತ್ಮಹತ್ಯೆ ಯತ್ನ ಆರೋಪ: ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು