ಬೆಂಗಳೂರು: ನಗರದ ವರ್ತೂರು ಹೋಬಳಿಯ ಸಿದ್ಧಾಪುರದ ಗ್ರಾಮದಲ್ಲಿ ಜಲಾಯನ ಪ್ರದೇಶವಾದ ಕಮಲದ ಕೊಳಕ್ಕೆ ಸೇರಿದ್ದು ಎನ್ನಲಾದ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮಂಜೂರು ಮಾಡಲಾಗಿದೆ ಎಂಬುದಾಗಿ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಅಲ್ಲದೇ, ವಿವಾದಿತ ಸ್ಥಳದಲ್ಲಿ ಕಮಲದ ಕೊಳವಿತ್ತು ಎಂಬುದನ್ನು ಕಂದಾಯ ದಾಖಲೆ ಮತ್ತು ನಕ್ಷೆ ಮಂಜೂರಾತಿ ಮೂಲಕ ದೃಢಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಕೊಳವಿದ್ದ ಜಾಗದಲ್ಲಿ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ವೈಟ್ ಫೀಲ್ಡ್ ರೈಸಿಂಗ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತು.
ವಿಚಾರಣೆ ವೇಳೆ ದಾಖಲೆ ಪರಿಶೀಲನೆ ನಡೆಸಿದ ನ್ಯಾಯಪೀಠ, 1970-71ರ ಕಂದಾಯ ದಾಖಲೆಗಳಲ್ಲಿ ವಿವಾದಿತ ಸ್ಥಳವು ಮುಫತ್ ಕಾವಲ್ ಸರ್ಕಾರಿ ಕುಂಟೆಯಿದ್ದು, ಅದನ್ನು ಹನುಮಂತಪ್ಪ ಎಂಬವರು ಉಳುಮೆ ಮಾಡುತ್ತಿದ್ದರು ಎಂದು ತಿಳಿಯುತ್ತದೆ. 1992-92ರಿಂದ 1994-95ರರವರೆಗಿನ ದಾಖಲೆಗಳಲ್ಲಿ ಮುಫತ್ ಕಾವಲ್ ಜೊತೆಗೆ ಕುಂಟೆ, ಅಥವಾ ಸರ್ಕಾರಿ ಜಲಮೂಲ ಎಂಬುದಾಗಿ ಉಲ್ಲೇಖವಾಗಿದೆ. ಪ್ರಕರಣದ ಪಕ್ಷಕಾರರು ಮತ್ತು ಸರ್ಕಾರಿ ಪ್ರಾಧಿಕಾರಿಗಳು ಸಲ್ಲಿಸಿದ ದಾಖಲೆಗಳಲ್ಲಿ ಕೆರೆ/ಕುಂಟೆ ಸರ್ವೇ ನಂ.8ರಲ್ಲಿ ಇರುವುದು ತಿಳಿಯುತ್ತದೆ ಎಂದು ಅಭಿಪ್ರಾಯಪಟ್ಟಿತು.
ಅಲ್ಲದೆ, ಸರ್ವೇ ನಂ.7ರಲ್ಲಿನ ಜಾಗದ ಪೈಕಿ 4 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿದೆ ಎನ್ನುವ ವಿಚಾರವನ್ನು ಪ್ರಸ್ತುತ ಅರ್ಜಿಯಲ್ಲಿ ವಿಚಾರಣೆ ನಡೆಸುವುದು ಅಪ್ರಸ್ತುತವಾಗಲಿದೆ. ಮೇಲಾಗಿ ಸಿದ್ಧಾಪುರ ಗ್ರಾಮದ ಸರ್ವೇ ನಂ.7ರಲ್ಲಿನ ಕಮಲದ ಕೊಳವಿತ್ತು ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ವಿಫಲವಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಸಿದ್ಧಾಪುರ ಗ್ರಾಮದ ಸರ್ವೆ ನಂಬರ್ 7ಕ್ಕೆ ಒಳಪಡುವ 22 ಗುಂಟೆ ಕಮಲದ ಕೆರೆ ಜಾಗದಲ್ಲಿ ಕಮಲದ ಕೆರೆಯಿತ್ತು. ಅದರಲ್ಲಿ 4 ಗುಂಟೆ ಜಾಗವನ್ನು 2012ರಲ್ಲಿ ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ಆ ಭೂಮಿಯನ್ನು 2021ರಲ್ಲಿ ಖರೀದಿಸಿದ್ದ ಕೆಲವು ವ್ಯಕ್ತಿಗಳು ಸದ್ಯ ಅನಧಿಕೃತವಾಗಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದರಿಂದ ಜಲಾಯನ ಪ್ರದೇಶದ ವಿಸ್ತ್ರೀರ್ಣ ಕುಗ್ಗುತ್ತದೆ ಹಾಗೂ ಅದು ಪರಿಸರದ ಮೇಲೆ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಇದನ್ನೂ ಓದಿ: ಸಾಲ ಹಿಂದಿರುಗಿಸುವಂತೆ ಒತ್ತಡ ಹಾಕುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ : ಹೈಕೋರ್ಟ್