ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು ಗಣರಾಜ್ಯೋತ್ಸವ ವೇಳೆ ರೈತ ವಿರೋಧಿ ನೀತಿ ಖಂಡಿಸಿ ನಡೆದ ಟ್ರ್ಯಾಕ್ಟರ್ ಪ್ರತಿಭಟನೆಗೆ 'ಟೂಲ್‌ಕಿಟ್' ಅನ್ನು ಶೇರ್ ಮಾಡಿದ ಆರೋಪದಡಿ ದೆಹಲಿಯ ಸೈಬರ್ ಕ್ರೈಂ ಪೊಲೀಸರು ಬೆಂಗಳೂರಿನಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನು ಬಂಧಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
ಕಳೆದ ತಿಂಗಳು ಜ.26ರಂದು ರೈತರ ಪ್ರತಿಭಟನೆ ಕುರಿತೆಂತೆ ರೂಪುರೇಷೆ ಬಗ್ಗೆ ಟ್ವಿಟ್ಟರ್ನಲ್ಲಿ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ 'ಟೂಲ್‌ಕಿಟ್' ಶೇರ್ ಮಾಡಿದ್ದರು. ಇದೇ ಅಂಶವನ್ನು ಇಟ್ಟುಕೊಂಡು ದಿಶಾ ರವಿ ಟೂಲ್‌ಕಿಟ್ ಸಿದ್ಧಪಡಿಸಿ ಪ್ರಸಾರ ಮಾಡಿದ್ದರು ಎನ್ನಲಾಗ್ತಿದೆ. ಟೂಲ್‌ಕಿಟ್ ವಿವರಣೆ ನೀಡುವಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ಕೇಳಿ ದೆಹಲಿ ಪೊಲೀಸರು ಪತ್ರ ಬರೆದಿದ್ದು, ಈ ಮೇಲ್ ಐಡಿ, ಯುಆರ್ಎಲ್ಗಳು ಹಾಗೂ ಸೋಶಿಯಲ್ ಮಿಡಿಯಾ ಖಾತೆಗಳ ಮಾಹಿತಿ ನೀಡುವಂತೆ ಹೇಳಲಾಗಿದೆ.
ಟೂಲ್‌ಕಿಟ್ ಸಂಪಾದಕಿಯಾಗಿರುವ ಬಂಧಿತ ದಿಶಾ ರವಿ ಇದರ ಹಂಚಿಕೆ ಹಾಗೂ ಪ್ರಸಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರತಿಭಟನೆ ಹೇಗೆ ನಡೆಯಬೇಕು, ಎಲ್ಲಿ ಪ್ರತಿಭಟಿಸಬೇಕು ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಟೂಲ್ಕಿಟ್ನಲ್ಲಿ ಪ್ರಸ್ತಾಪಿಸಲಾಗಿತ್ತು ಎನ್ನಲಾಗ್ತಿದೆ.
ವಾಟ್ಸ್ಯಾಪ್ ಮೂಲಕ ಮಾಹಿತಿ ಹಂಚಿಕೆ:
ದಿಶಾ ರವಿ ಸಿದ್ಧಪಡಿಸಿದ ಟೂಲ್ಕಿಟ್ನಂತೆಯೇ ಪ್ರತಿಭಟನೆ ನಡೆದಿತ್ತು. ಟೂಲ್ಕಿಟ್ನಲ್ಲಿ ಹೋರಾಟ ಹೇಗೆ ನಡೆಯಬೇಕು, ಹೋರಾಟದಲ್ಲಿ ಯಾರ್ಯಾರು ಭಾಗಿಯಾಗಬೇಕು ಎಂಬ ಸಂಪೂರ್ಣ ಮಾಹಿತಿ ತಿಳಿಸಲಾಗಿತ್ತು. ಟೂಲ್ ಕಿಟ್ ವಿವಾದದಲ್ಲಿ ದಿಶಾ ರವಿ ಬೆಂಬಲಕ್ಕೆ ನಿಂತಿದ್ಯಾರು?, ದಿಶಾ ರವಿಗೂ ಖಲಿಸ್ತಾನದ ಉಗ್ರರಿಗೂ ನಂಟಿದೆಯಾ?, ಹೋರಾಟದ ಹಿಂದೆ ಖಲಿಸ್ತಾನದ ಉಗ್ರರಿದ್ದಾರಾ ಎಂಬುದರ ಕುರಿತಂತೆ ದೆಹಲಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಓದಿ: 'ಟೂಲ್‌ಕಿಟ್' ಅಪ್ಲೋಡ್ ಆರೋಪ: ದಿಶಾ ರವಿ ಅರೆಸ್ಟ್, ಐದು ದಿನ ಪೊಲೀಸ್ ಕಸ್ಟಡಿಗೆ
ದಿಶಾರವಿ ಹಿನ್ನೆಲೆ:
ಬೆಂಗಳೂರಿನ ಸೋಲದೇವನಹಳ್ಳಿಯ ಸೋಮಶೆಟ್ಟಿ ಹಳ್ಳಿಯ ನಿವಾಸಿಯಾಗಿರುವ ದಿಶಾ ರವಿ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ವೃತ್ತಿ ಆರಂಭಿಸಿದ್ದರು. ತಂದೆ ರವಿ ಮೈಸೂರಿನಲ್ಲಿ ಕ್ರೀಡಾ ತರಬೇತುದಾರರಾಗಿದ್ದು, ತಾಯಿ ಮಂಜುಳಾ ಗೃಹಿಣಿಯಾಗಿದ್ದಾರೆ. ಫ್ರೈಡೇ ಫಾರ್ ಫ್ಯೂಚರ್ ಸಂಸ್ಥೆಯಲ್ಲಿ ಸಕ್ರಿಯವಾಗಿದ್ದ ವಿದ್ಯಾರ್ಥಿಗಳ ಜೊತೆ ಪ್ರತಿ ಶುಕ್ರವಾರ ನಡೆಯುತ್ತಿದ್ದ ದಿಶಾ ರವಿ ನೇತೃತ್ವದ ತರಗತಿಗಳನ್ನು ಬಹಿಷ್ಕರಿಸಿ ಹವಾಮಾನ ಬದಲಾವಣೆ ಹಾಗೂ ರಾಜಕೀಯ ನಾಯಕರ ಬಗ್ಗೆ ಮಾತನಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪರಿಸರ ಬಗ್ಗೆ ಶಾಲಾ-ಕಾಲೇಜುಗಳಿಗೆ ತೆರಳಿ ಪರಿಸರದ ಬಗ್ಗೆ ಅರಿವು ಮೂಡಿಸುವಲ್ಲಿ ನಿರತರಾಗುತ್ತಿದ್ದರು ಎನ್ನಲಾಗುತ್ತಿದೆ.