ಬೆಂಗಳೂರು: ರಾಜ್ಯದ ಎಲ್ಲಾ ಹೋಟೆಲ್ಗಳಲ್ಲಿ ಇಂಜಿನಿಯರ್ಗಳ ಮೂಲಕ ಹಣ ಕಲೆಕ್ಷನ್ ಮಾಡುವ ವ್ಯವಹಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಗಂಭೀರ ಆರೋಪ ಮಾಡಿದ್ದಾರೆ.
ಪ್ರಧಾನಿ ಮೋದಿ ರ್ಯಾಲಿಗಾಗಿ ಅರಮನೆ ಮೈದಾನದಲ್ಲಿ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಪ್ರಧಾನಿ ಮೋದಿ ಈ ಮುಂಚೆ ಆರೋಪಿಸಿರುವ ಕಮಿಷನ್ ಮಾತು ಸತ್ಯವಾಗಿದೆ. ಈಗ ರಾಜ್ಯದಲ್ಲಿ 10%, 20% ಕಮಿಷನ್ ದಂಧೆ ನಡೆಯುತ್ತಿದೆ. ಈ ಬಾರಿ ಚುನಾವಣೆ ವೇಳೆ ರಾಜ್ಯಾದ್ಯಂತ ದುಡ್ಡು ವಿತರಣೆಯಾಗುವ ಸಾಧ್ಯತೆ ಇದೆ. ಇಲಾಖೆಯ ಇಂಜಿನಿಯರ್ ಒಬ್ಬ ರಾಜಮಹಲ್ ಹೋಟೆಲ್ನಲ್ಲಿ ಕೂತು ಹಣ ಸಂಗ್ರಹ ಮಾಡುತ್ತಿದ್ದಾನೆ ಎಂದು ಆರೋಪಿಸಿದರು.
ಸಿದ್ದರಾಮಯ್ಯರದ್ದು ಚಿಲ್ಲರೆ, ಉಡಾಫೆ ಮಾತು:
ಸಿದ್ದರಾಮಯ್ಯ ಅವರು ಚಿಲ್ಲರೆ, ಉಡಾಫೆ ಮಾತುಗಳನ್ನು ಆಡುತ್ತಿದ್ದಾರೆ ಎಂದು ಡಿವಿಎಸ್ ಕಿಡಿ ಕಾರಿದರು. ಅವರ ಮಾತುಗಳಿಂದ ರಾಜ್ಯಕ್ಕೆ ಅವಮಾನವಾಗಿದೆ. ಸಿದ್ದರಾಮಯ್ಯ ಮಾತು ದುರಹಂಕಾರದ ಪರಮಾವಧಿಯಾಗಿದೆ. 10 ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹೆಸರು ಹೇಳಲು ಇವರಿಗೆ ಯೋಗ್ಯತೆ ಇಲ್ಲ. ಒಂದೇ ಒಂದು ದಿನ ಮನಮೋಹನ್ ಸಿಂಗ್ ಹೆಸರು ಹೇಳಲು ಧೈರ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜನ ಸಿದ್ದರಾಮಯ್ಯರನ್ನು ಮೈಸೂರಿಂದ ಓಡಿಸಿದ್ದಾರೆ. ಬೆಂಗಳೂರಲ್ಲಿ ಅವರಿಗೆ ಯಾವುದೇ ಸ್ಥಾನಮಾನವಿಲ್ಲ. ಅವರು ಗೆದ್ದಿರುವ ಬಾದಾಮಿಯಲ್ಲಿ ಅವರ ವಾಸ್ತವ್ಯಕ್ಕೆ ಮನೆ ಕೊಡಲು ಯಾರೂ ಸಿದ್ಧರಿಲ್ಲ. ಈ ಪರಿಸ್ಥಿತಿಯಲ್ಲಿರುವವರು ನಮಗೆ ಬುದ್ಧಿವಾದ ಹೇಳುತ್ತಿದ್ದಾರೆ. ಎಲ್ಲದಕ್ಕೂ ಜನ ಉತ್ತರ ನೀಡುತ್ತಾರೆ ಎಂದು ಸವಾಲು ಹಾಕಿದರು.