ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನಿಚ್ಚಳ ಬಹುಮತ ಸಾಧಿಸಿರುವ ನ್ಯಾಷನಲ್ ಕಾನ್ಫ್ರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಯು ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಿದೆ.
ನಿಯೋಜಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿ ನೂತನ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ಬೇಡಿಕೆ ಮಂಡಿಸಿದರು. ಮಿತ್ರ ಪಕ್ಷವಾದ ಕಾಂಗ್ರೆಸ್ ಅಧಿಕೃತವಾಗಿ ಸರ್ಕಾರಕ್ಕೆ ಬೆಂಬಲ ಸೂಚಿಸಿದೆ.
Earlier this evening, Chief Minister-designate @OmarAbdullah called on the Honorable Lieutenant Governor of Jammu and Kashmir, @manojsinha_ , at the Raj Bhawan in Srinagar to stake his claim to form the next government in Jammu and Kashmir. He also submitted all the letters of… pic.twitter.com/IHo3FLTFdW
— JKNC (@JKNC_) October 11, 2024
ಬಳಿಕ ಮಾತನಾಡಿರುವ ನಿಯೋಜಿತ ಸಿಎಂ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಭೇಟಿಯಾಗಿ, ಎನ್‌ಸಿ, ಕಾಂಗ್ರೆಸ್, ಸಿಪಿಐ(ಎಂ), ಎಎಪಿ, ಬೆಂಬಲಿತ ಸ್ವತಂತ್ರ ಪಕ್ಷಗಳ ಸರ್ಕಾರ ರಚನೆಗೆ ಕೋರಿದ್ದೇವೆ. ಎನ್ಸಿಗೆ ಮಿತ್ರಪಕ್ಷಗಳು ನೀಡಿದ ಬೆಂಬಲ ಪತ್ರವನ್ನು ನೀಡಲಾಗಿದೆ. ಚುನಾಯಿತ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕೆ ಶೀಘ್ರ ದಿನಾಂಕ ನಿಗದಿಪಡಿಸುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದರು.
ಬುಧವಾರ ಪ್ರಮಾಣವಚನ? ಕಣಿವೆ ನಾಡಿನಲ್ಲಿ ದಶಕದ ಬಳಿಕ ಚುನಾಯಿತ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ನೂತನ ಸಿಎಂ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಅಕ್ಟೋಬರ್ 16 ರಂದು ನಡೆಯುವ ಸಾಧ್ಯತೆ ಇದೆ. ಲೆಫ್ಟಿನೆಂಟ್ ಗವರ್ನರ್ ಕೆಲ ಪ್ರಕ್ರಿಯೆಗಳನ್ನು ಪೂರೈಸಬೇಕಿದ್ದು, ಪ್ರತಿಜ್ಞಾವಿಧಿ ಸಮಾರಂಭಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ ಎಂದು ಹೇಳಲಾಗಿದೆ.
ಸದ್ಯ ಕೇಂದ್ರಾಡಳಿತ ಪ್ರದೇಶ ಜಮ್ಮು- ಕಾಶ್ಮೀರದಲ್ಲಿ ಕೇಂದ್ರದ ನಿರ್ದೇಶನದ ಆಡಳಿತವಿದೆ. ಇದೀಗ, ಚುನಾಯಿತ ಸರ್ಕಾರವು ರಚನೆಯಾಗಬೇಕಿದ್ದು, ಅದಕ್ಕೂ ಮೊದಲು ಲೆಫ್ಟಿನೆಂಟ್ ಗವರ್ನರ್ ಕೆಲ ದಾಖಲೆಗಳನ್ನು ಸಿದ್ಧಪಡಿಸಬೇಕು. ಅವುಗಳನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಬೇಕು. ನಂತರ ಪ್ರಕ್ರಿಯೆಗಾಗಿ ಗೃಹ ಸಚಿವಾಲಯಕ್ಕೆ ತೆರಳಲಿವೆ. ಅಲ್ಲಿಂದ ಒಪ್ಪಿಗೆ ಸಿಕ್ಕ ಬಳಿಕ ಈ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕೆಲವು ಸ್ವತಂತ್ರ ಅಭ್ಯರ್ಥಿಗಳು ನ್ಯಾಷನಲ್ ಕಾನ್ಫರೆನ್ಸ್‌ಗೆ ಸೇರ್ಪಡೆಗೊಂಡಿದ್ದಾರೆ. ಸರ್ಕಾರಕ್ಕೆ ಅವರು ನೇರವಾಗಿ ಬೆಂಬಲ ಘೋಷಿಸಿದ್ದಾರೆ.
ಎರಡನೇ ಬಾರಿಗೆ ಒಮರ್ ಸಿಎಂ: ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಅವರು ತಮ್ಮ ಪಕ್ಷದ ಶಾಸಕಾಂಗ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿಎಂ ಅಭ್ಯರ್ಥಿಯಾಗಿಯೂ ಅವರೇ ಸೂಚಿತವಾಗಿದ್ದಾರೆ. ಹೀಗಾಗಿ, ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅವರು ಅಧಿಕಾರಕ್ಕೇರಲು ಸಜ್ಜಾಗಿದ್ದಾರೆ. ಇದಕ್ಕೂ ಮೊದಲು ಅವರು, 2009 ರಿಂದ 2014 ರ ವರೆಗೆ ಇದೇ ಎನ್‌ಸಿ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದರು.
ವಿಧಾನಸಭೆಯ 90 ಸ್ಥಾನಗಳಿಗೆ ಇತ್ತೀಚಿಗೆ ಮುಗಿದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫ್ರೆನ್ಸ್ 42 ಸ್ಥಾನ ಗೆದ್ದರೆ, ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಬಿಜೆಪಿ 29, ಎಎಪಿ, ಇತರರು 7 ಮಂದಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಅ.17 ರಂದು ಹರಿಯಾಣ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ