ಬೆಂಗಳೂರು: ಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದರೂ ಮುಸ್ಲಿಂ ವಿದ್ಯಾರ್ಥಿನಿಯರು ಕೋರ್ಟ್ ತೀರ್ಪು ಕಡೆಗಣಿಸಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತಿದೆ. ಹೀಗಾಗಿ, ಅವರ ವಿರುದ್ಧ ಎಫ್ ಐ ಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಕರ್ನಾಟಕ ರಾಜ್ಯದ ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿತು.
ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಪ್ರಾಂತ್ಯದ ಮುಖಂಡ ಮತ್ತು ರಾಜ್ಯ ಹಿಂದೂ ಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಅವರು, ಕೋರ್ಟ್ ತೀರ್ಪು ಬರುವ ತನಕ ಯಾವುದೇ ಧಾರ್ಮಿಕ ಉಡುಪು ಧರಿಸುವಂತಿಲ್ಲ ಎಂದಿದ್ದರು. ಮಧ್ಯಂತರ ಆದೇಶವನ್ನೂ ಮೀರಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಜೊತೆಗೆ ಬುರ್ಕಾ ಧರಿಸಿ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಕೋರ್ಟ್ ಮಧ್ಯಂತರ ಆದೇಶ ಬಂದ ನಂತರದಿಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಬಿಟ್ಟು ತರಗತಿಗೆ ಹಾಜರಾಗಿದ್ದಾರೆ. ಕುಶಾಲನಗರ ಸೇರಿದಂತೆ ಹಲವು ಕಡೆ ಹಿಂದೂ ವಿದ್ಯಾರ್ಥಿಗಳ ಮೇಲೆ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ಮಾಡುತ್ತಿದ್ದಾರೆ. ಕಾನೂನು ಚೌಕಟ್ಟು ಮೀರಿ ಮುಸ್ಲಿಂ ವಿದ್ಯಾರ್ಥಿಗಳು ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ವಿದ್ಯಾರ್ಥಿಗಳಿಗೆ ರಕ್ಷಣೆ ಬೇಕಿದೆ: ಹಿಂದೂ ವಿದ್ಯಾರ್ಥಿಗಳಿಗೆ ರಕ್ಷಣೆ ಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ನ್ಯಾಯಾಲಯದ ಆದೇಶಕ್ಕೆ ಮುಸ್ಲೀಮರು ಬೆಲೆ ನೀಡುತ್ತಿಲ್ಲ ಎಂದು ದೂರಿದರು.
ಇಸ್ಲಾಮಿಕ್ ಡ್ರೆಸ್ ಕೋಡ್ ತರಲು ಪ್ರಯತ್ನ: ಶಿಕ್ಷಕಿ ಶಶಿಕಲಾ ಮುಸ್ಲಿಂ ಪೋಷಕರ ಗಲಾಟೆಯಿಂದ ತನ್ನ ಕೆಲಸವನ್ನೇ ಕಳೆದುಕೊಂಡರು. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗುತ್ತಿದೆ. ಥ್ರೆಟ್ ಕಾಲ್ ಬರ್ತಿದೆ. ಈ ಸಂಬಂಧ ಗೃಹ ಸಚಿವರ ಗಮನಕ್ಕೆ ವಿಚಾರ ತಂದಿದ್ದೇವೆ. ಈ ಎಲ್ಲದರ ಹಿಂದೆ ಮತೀಯ ಶಕ್ತಿಗಳು ಕೆಲಸ ಮಾಡುತ್ತಿವೆ. ಇಸ್ಲಾಮಿಕ್ ಡ್ರೆಸ್ ಕೋಡನ್ನು ಶಾಲೆಯಲ್ಲಿ ತರಲು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಮನವಿ: ಮೋಹನ್ ಗೌಡ ಮುಂದುವರೆದು ಮಾತನಾಡಿ, ಮಧ್ಯಂತರ ಆದೇಶವನ್ನೂ ಮೀರಿ ಮುಸ್ಲಿಂ ವಿದ್ಯಾರ್ಥಿಗಳು ವರ್ತಿಸುತ್ತಿದ್ದಾರೆ. ನಾಳೆ ಸಮವಸ್ತ್ರದ ಪರವಾಗಿ ತೀರ್ಪು ಬಂದರೂ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಾರೆ.
ವಿದ್ಯಾರ್ಥಿಗಳು ಹಾಗೂ ಹಿಂದೂ ಕಾರ್ಯಕರ್ತರ ಸುರಕ್ಷತೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಕ್ರಮ ವಹಿಸಬೇಕು. ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಮೂಲಕ ನಾವು ಮನವಿ ಮಾಡುತ್ತೇವೆ ಎಂದರು.
ಬೃಹತ್ ಹೋರಾಟದ ಎಚ್ಚರಿಕೆ: ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಎಲ್.ಕೆ ಸುವರ್ಣ ಮಾತನಾಡಿ, ಕೋರ್ಟ್ ಆದೇಶ ಮೀರಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಹಿಂದೂ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರ ಮೇಲೆ ಹಲವು ಕ್ರಮ ಕೈಗೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಬೃಹತ್ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಕನ್ಯಾಕುಮಾರಿಯಲ್ಲಿ ರಾಷ್ಟ್ರೀಯ ಅಧಿವೇಶನ: ಕನ್ಯಾಕುಮಾರಿಯ ನಾಗರ ಕೋವಿಲ್ನಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧಿವೇಶನ ನಡೆಯಲಿದೆ. ಹಿಂದುತ್ವದ ಮೇಲೆ ಆಗುತ್ತಿರುವ ಅನ್ಯಾಯದ ವಿಚಾರವಾಗಿ ಅಲ್ಲಿ ಚರ್ಚೆ ನಡೆಯಲಿದೆ. ಮುಂದಿನ ಹೋರಾಟ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಓದಿ: ಯುವತಿಗೆ ಚುಡಾಯಿಸಿದ ಯುವಕ- ಎರಡು ಗುಂಪಿನ ನಡುವೆ ಹೊಡೆದಾಟ: ಉದ್ರಿಕ್ತರಿಗೆ ಏಟು ಕೊಟ್ಟ ಪೊಲೀಸರು