ಬೆಂಗಳೂರು: ಅನರ್ಹತೆ ಸಂಬಂಧ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಯಾವಾಗ ಕೈಗೆತ್ತಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಇಂದು ದೆಹಲಿಗೆ ಅನರ್ಹ ಶಾಸಕರು ತೆರಳುವ ಸಾಧ್ಯತೆ ಇದೆ.
ಇಂದು ದೆಹಲಿಯಲ್ಲಿ ತಮ್ಮ ಪರ ವಕೀಲರ ಭೇಟಿಗೆ ಅನರ್ಹ ಶಾಸಕರು ನಿರ್ಧಾರ ಮಾಡಿದ್ದಾರೆ. ಅವಕಾಶ ಸಿಕ್ಕಿದ್ರೆ ಬಿಜೆಪಿ ಹೈಕಮಾಂಡ್ ಕೂಡ ಭೇಟಿ ಮಾಡುವ ನಿರ್ಧಾರ ಮಾಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸುವ ಇಂಗಿತ ಹೊಂದಿದ್ದಾರೆ ಎನ್ನಲಾಗಿದೆ.
ಕೆಲವರು ಮಂಗಳವಾರ ತಡರಾತ್ರಿಯೇ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದು ಮತ್ತೆ ಕೆಲವರು ಬುಧವಾರ ಬೆಳಗ್ಗೆ ಹೊರಡುವ ಯೋಚನೆ ಮಾಡಿದ್ದಾರೆ. ಸುಪ್ರಿಂಕೋರ್ಟ್ನಲ್ಲಿ ಶುಕ್ರವಾರ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮ ವಕೀಲರ ಜೊತೆ ಒಂದಿಷ್ಟು ಮಾಹಿತಿ ವಿನಿಮಯ ಮಾಡಿಕೊಳ್ಳಲು ದಾಖಲೆಗಳನ್ನು ಕೂಡ ಒದಗಿಸಲಿದ್ದಾರೆ.
ರಮೇಶ್ ಜಾರಕಿಹೊಳಿ ನಿವಾಸದಿಂದ ಒಟ್ಟಿಗೆ ತೆರಳಿದ ಅನರ್ಹ ಶಾಸಕರು ನಿನ್ನೆ ಇದೇ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬಿಜೆಪಿಯ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ನೇತೃತ್ವದಲ್ಲಿ ಖಾಸಗಿ ಹೊಟೇಲ್ನಲ್ಲಿ ನಿನ್ನೆ ರಾತ್ರಿ ಕೆಲವರು ಸಭೆ ಸೇರಿ ದೆಹಲಿ ಪ್ರಯಾಣದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಸೇರಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಮಾತನಾಡಿ, ಸ್ಪೀಕರ್ ಕಾನೂನು ಬಾಹಿರ ಆದೇಶ ಹೊರಡಿಸಿದ್ದಾರೆ. ಇದರ ವಿರುದ್ಧ ಸುಪ್ರೀಂಗೆ ಹೋಗಿದ್ದೇವೆ. ಮಂಗಳವಾರ ನಮ್ಮ ಕೇಸ್ ಸುಪ್ರೀಂನಲ್ಲಿ ವಿಚಾರಣೆಗೆ ಬರಬೇಕಿತ್ತು. ಆದರೆ ಸುಪ್ರೀಂನಲ್ಲಿ ರಾಮಜನ್ಮಭೂಮಿ ವಿಚಾರಣೆ ಬಂದಿದೆ. ಐದು ದಿನಗಳ ಕಾಲ ಇದೇ ವಿಚಾರಣೆ ನಡೆಯಲಿದೆ. ಹೀಗಾಗಿ ತ್ವರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಲು ನಾವೆಲ್ಲರೂ ದೆಹಲಿಗೆ ತೆರಳಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.