ಬೆಂಗಳೂರು: ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡುತ್ತಿದ್ದೇನೆ. ವಸ್ತುಗಳು ನಷ್ಟ ಆದ ಬಗ್ಗೆ ಪಟ್ಟಿ ಮಾಡಬೇಕು. ಅದನ್ನು ತಂದು ಕೊಡುತ್ತೇನೆ. ಆದಾದ ಬಳಿಕ ಎಫ್ಐಆರ್ ದಾಖಲಿಸ್ತಾರೆ ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದರು.
ಸದ್ಯ ಪೊಲೀಸರು ಸರಿಯಾಗಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ನಾನು ಯಾರ ಮೇಲೂ ಆರೋಪ ಮಾಡಿಲ್ಲ. ಹಾಗೆ ನಾನು ಎಲ್ಲರ ಜೊತೆ ಅಣ್ಣ- ತಮ್ಮನಂತೆ ಇದ್ದೇನೆ. ನನ್ನ ಮನೆ ಮೇಲೆ ದಾಳಿಯಾಗಿದೆ. ನಮ್ಮ ಮನೆಯಲ್ಲಿ ಯಾರಿಗಾದರೂ ಪ್ರಾಣ ಹಾನಿಯಾಗಿದ್ದರೆ ಯಾರು ಹೊಣೆ. ಮೂರು ಕೋಟಿ ರೂ. ಮೌಲ್ಯದಷ್ಟು ಮನೆ ಸೇರಿದಂತೆ ವಸ್ತುಗಳು ಸಂಪೂರ್ಣ ನಾಶವಾಗಿದೆ. ರಾಜಕೀಯ ವೈಷಮ್ಯ ನನ್ನ ಮೇಲೆ ಮಾಡುವುದು ಏನಿದೆ ಎಂದು ಪ್ರಶ್ನಿಸಿದರು.
ಮಾಜಿ ಮೇಯರ್ ಸಂಪತ್ ರಾಜ್ ಕೈವಾಡ ಇದೆಯಾ ಎಂದು ಕೇಳಿದ ಪ್ರಶ್ನೆಗೆ, ನನ್ನ ಮನೆ ಮೇಲೆ ದಾಳಿ ಮಾಡಿ ಹಾನಿ ಮಾಡಲಾಗಿದೆ. ಇದು ನಮ್ಮ ತಂದೆ - ತಾಯಿ ಕಟ್ಟಿದ ಮನೆಯಾಗಿದೆ. ನವೀನ್ ಕುಮಾರ್ ನಮ್ಮ ಅಕ್ಕನ ಮಗ. ಹತ್ತು ವರ್ಷಗಳಿಂದ ನನಗೂ - ಅವನಿಗೂ ಸಂಬಂಧ ಇರಲಿಲ್ಲ. ಅಕ್ಕ ಮನೆಗೆ ಬರ್ತಾರೆ. ಆಕೆಯ ಮಗ ನವೀನ್ ಬರೋದಿಲ್ಲ ಎಂದು ಹೇಳಿದರು.
ಪೊಲೀಸರು ಇನ್ನೂ ಹೆಚ್ಚಿನ ಬಂದೋಬಸ್ತ್ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ತಾರೆ. ಯಾವುದೇ ಸಂಘಟನೆ ಕೈವಾಡ ಇದ್ದರೂ ಅದನ್ನ ಪೊಲೀಸರು ಕ್ರಮ ಕೈಗೊಳ್ತಾರೆ. 144 ಸೆಕ್ಷನ್ ಇದ್ದ ಕಾರಣ ಇಂದು ದೂರು ದಾಖಲು ಮಾಡುತ್ತಿದ್ದೇನೆ. ನನ್ನ ಆಸ್ತಿ ಪಾಸ್ತಿ ನಷ್ಟವಾದ ಕುರಿತು ಮಾತ್ರ ದೂರು ದಾಖಲಿಸಿದ್ದೇನೆ. ಉಳಿದವರಿಗೆ ಪ್ರತ್ಯೇಕ ದೂರು ದಾಖಲಿಸಲು ಹೇಳಿದ್ದೇನೆ ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.