ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ದೇಶದ ಗಮನ ಸೆಳೆಯುತ್ತಿದೆ. ಏಕೆಂದರೆ ನಾವು ಈಡೇರಿಸಬಹುದಾದ ಭರವಸೆಯನ್ನು ನೀಡಿದ್ದೇವೆ ಎಂದು ಎಐಸಿಸಿ ವಕ್ತಾರೆ ಖುಷ್ಬೂ ಸುಂದರ್ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪ್ರಣಾಳಿಕೆ ಸಮಗ್ರವಾಗಿದೆ. ನ್ಯಾಯ ಯೋಜನೆ ನಮ್ಮ ಭರವಸೆಗಳಲ್ಲಿ ಒಂದಾಗಿದ್ದು, ಜನರನ್ನು ಅಪಾರವಾಗಿ ಸೆಳೆದಿದೆ. ಮಹಿಳೆಯರು, ಬಡವರು, ಮಧ್ಯಮ ವರ್ಗ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿದ್ದೇವೆ. ನಾವು ಈಡೇರಿಸಬಲ್ಲ ಭರವಸೆ ನೀಡಿದ್ದು, ನರೇಂದ್ರ ಮೋದಿ ತರಹ ಈಡೇರಿಸಲಾಗದ ಭರವಸೆ ಕೊಟ್ಟಿಲ್ಲ.
ಅಲ್ಲದೆ ತಳಮಟ್ಟದಿಂದ ಜನರ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದೇವೆ. ಸ್ಟಾರ್ಟ್ ಅಪ್, ಸ್ಟ್ಯಾಂಡ್ ಅಪ್ ಅಂತ ಸಾಕಷ್ಟು ಯೋಜನೆ ತಂದು ಮೋದಿ ಸರ್ಕಾರ ವಿಫಲವಾಗಿದೆ. ಜಿಎಸ್ಟಿ ನಮ್ಮ ಕನಸಿನ ಯೋಜನೆ, ಆದರೆ ಸರಿಯಾದ ಸ್ಲ್ಯಾಬ್ ಮಾಡಲಾಗದೇ ನಿಜವಾದ ಆಶಯ ಈಡೇರದಂತೆ ಬಿಜೆಪಿ ಮಾಡಿದೆ. ಪ್ರತಿ ಹಂತದಲ್ಲಿ ನಾಗರಿಕರ ಮೇಲೆ ಜಿಎಸ್ಟಿ ಹಾಗೂ ನೋಟು ಅಮಾನ್ಯ ಕ್ರಮ ಜನರಲ್ಲಿ ಹೆದರುವ ಸ್ಥಿತಿ ಉಂಟು ಮಾಡಿದೆ ಎಂದರು.
ಜನ ಕಳೆದ ಅವಧಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ತಪ್ಪು ಮಾಡಿದೆ. ಇದರಿಂದ ಇನ್ನೊಮ್ಮೆ ಅಧಿಕಾರಕ್ಕೆ ತರದಿರಲು ನಿರ್ಧರಿಸಿದ್ದಾರೆ. 2 ಕೋಟಿ ಉದ್ಯೋಗ ಭರವಸೆ ನೀಡಿದ್ದ ಎನ್ಡಿಎ ಸರ್ಕಾರ 10 ಕೋಟಿ ಉದ್ಯೋಗ ನೀಡಬೇಕಿತ್ತು, ಆದರೆ ಉದ್ಯೋಗ ನೀಡಿಕೆಯಲ್ಲಿ ಕೊರತೆ ಆಗಿದೆ. ಯಾರಿಗೂ ಪ್ರಶ್ನೆ ಕೇಳದ ರೀತಿ ಸರ್ವಾಧಿಕಾರಿ ರಿತಿಯಲ್ಲಿ ವರ್ತಿಸುತ್ತಿದೆ. ಚೌಕಿದಾರ್ ಚೋರ್ ಆಗಿದ್ದಾರೆ. ದೇಶದಲ್ಲಿ ಕಳ್ಳತನ ಆಗುತ್ತಿದೆ. ಚೌಕಿದಾರ್ ಯಾವುದೇ ತನಿಖೆ ಕೈಗೊಳ್ಳುತ್ತಿಲ್ಲ, ಅಲ್ಲಿ ಅವರ ಪಾತ್ರವೂ ಇದೆಯೇನೋ ಎನ್ನುವ ಅನುಮಾನ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ನಡಾವಳಿಕೆಯೇ ಗುಮಾನಿ ಮೂಡಿಸುತ್ತಿದೆ. ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ಆರ್ಥಿಕ ಪರಿಸ್ಥಿತಿ, ಬಡವರಿಗೆ ಕನಿಷ್ಠ ಆದಾಯದ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಬಿಜೆಪಿ ಕಳೆದ ಐದು ವರ್ಷ ಗೇಮ್ ಚೇಂಜರ್ ಆಗಿ ಕೆಲಸ ಮಾಡಿಲ್ಲ, ಕೇವಲ ನೇಮ್ ಚೇಂಜರ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಾಲ ಕೊಡುವ ಕೆಲಸ ಯುಪಿಎ ಸರ್ಕಾರ ಮಾಡಿತ್ತು. ಮೋದಿ ಪ್ರಧಾನಿಯಾಗಿ ಕೆಲಸ ಮಾಡುತ್ತಿಲ್ಲ, ಸರ್ವಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರಫೇಲ್ ಡೀಲ್ ವಿಚಾರದಲ್ಲಿ ಸುಪ್ರೀಂ ನಿರ್ಧಾರವನ್ನ ಸ್ವಾಗತ ಮಾಡುತ್ತೇವೆ. ದೇಶವನ್ನ ರಕ್ಷಣೆ ಮಾಡ್ತೀನಿ ಅನ್ನೋ ಮೋದಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.