ಬೆಂಗಳೂರು: ರಾಜ್ಯದ ಸಚಿವರು ಹಾಗೂ ಶಾಸಕರುಗಳನ್ನು ತೆಲಂಗಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕ್ಲಸ್ಟರ್ ಉಸ್ತುವಾರಿ ಹಾಗೂ ಕ್ಷೇತ್ರವಾರು ವೀಕ್ಷಕರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎಐಸಿಸಿ) ನೇಮಿಸಿದೆ.
ತೆಲಂಗಾಣದಲ್ಲಿ ಚುನಾವಣಾ ಕಾವು ಹೆಚ್ಚುತ್ತಿದೆ. ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯಲು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷರು ರಾಜ್ಯದ ಕೈ ನಾಯಕರಿಗೆ ತೆಲಂಗಾಣ ಚುನಾವಣೆಯ ಹೊಣೆಗಾರಿಕೆ ನೀಡಿದ್ದಾರೆ. ಈ ಸಂಬಂಧ ರಾಜ್ಯದ 10 ಸಚಿವರುಗಳನ್ನು ಕ್ಲಸ್ಟರ್ ಉಸ್ತುವಾರಿಗಳಾಗಿ ಹಾಗೂ 48 ಶಾಸಕರನ್ನು ಕ್ಷೇತ್ರವಾರು ಅಬ್ಸರ್ವರ್ಗಳನ್ನಾಗಿ ಮಾಡಲಾಗಿದೆ.
ತೆಲಂಗಾಣ ಚುನಾವಣೆಯ ಎಐಸಿಸಿ ಕ್ಲಸ್ಟರ್ ಉಸ್ತುವಾರಿಗಳಾಗಿ ಸಚಿವರಾದ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಎಂ.ಸಿ.ಸುಧಾಕರ್, ಶರಣ ಪ್ರಕಾಶ ಪಾಟೀಲ್, ಕೆ.ಹೆಚ್.ಮುನಿಯಪ್ಪ, ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್ ಖಾನ್, ಶಿವರಾಜ್ ತಂಗಡಗಿ ಮತ್ತು ಬಿ.ನಾಗೇಂದ್ರ ನೇಮಕವಾಗಿದ್ದಾರೆ.
ಕ್ಷೇತ್ರವಾರು ವೀಕ್ಷಕರಾಗಿ 48 ಕಾಂಗ್ರೆಸ್ ಶಾಸಕರನ್ನು ನೇಮಕವಾಗಿದೆ. ಇದರಲ್ಲಿ ಎಂಎಲ್‌ಸಿ ಉಮಾಶ್ರೀ, ಮಹಂತೇಶ್ ಕೌಜಲಗಿ, ಸಲೀಂ ಅಹಮ್ಮದ್, ಅನಿಲ್ ಚಿಕ್ಕಮಾಧು, ಯು.ಬಿ.ವೆಂಕಟೇಶ್, ಕೋನಾರೆಡ್ಡಿ, ಪ್ರಕಾಶ್ ಹುಕ್ಕೇರಿ, ಸುಧಾ ದಾಸ್, ಯು.ಬಿ.ಬಣಕರ್, ವಿನಯ್ ಕುಲಕರ್ಣಿ, ಪ್ರದೀಪ್ ಈಶ್ವರ್, ನಾರಾಯಣ ಸ್ವಾಮಿ, ಶಿವಣ್ಣ, ಎಂ.ಆರ್.ಸೀತಾರಾಮ್, ಬಸವರಾಜ ರಾಯರೆಡ್ಡಿ, ಕಂಪ್ಲಿ ಗಣೇಶ್ ಇದ್ದಾರೆ.
ಇದನ್ನೂ ಓದಿ: ತೆಲಂಗಾಣ ಚುನಾವಣೆ : ಸಿಎಂ ಕೆಸಿಆರ್ ವಿರುದ್ಧ ಇಬ್ಬರು ಕಣಕ್ಕೆ ; ಮೂವರು ಸಂಸದರು ಸೇರಿ 52 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ನವೆಂಬರ್ 10 ವಿಧಾನಸಭೆ ಚುನಾವಣೆಗೆ ನಾಮಮತ್ರ ಸಲ್ಲಿಸಲು ಕೊನೆಯ ದಿನ. ರಾಜ್ಯದ 119 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ನವೆಂಬರ್ 13 ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 15 ಕೊನೆಯ ದಿನ. ನವೆಂಬರ್ 30ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಇದನ್ನೂ ಓದಿ: ತೆಲಂಗಾಣ ವಿಧಾನಸಭೆ ಚುನಾವಣೆ : ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪರ್ವ ಆರಂಭ