ಬೆಂಗಳೂರು: ಡಾಟಾಕೇಂದ್ರಿತ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆಯ ಮೂಲಕ ನಗರದಲ್ಲಿ ಸಂಚಾರ ಸುರಕ್ಷತೆ ಹಾಗೂ ಸಂಚಾರ ದಟ್ಟಣೆಯನ್ನು ಸುಧಾರಿಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಹಾಗೂ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಡುವೆ ಒಡಂಬಡಿಕೆ ನಡೆದಿದೆ. ಅದರನ್ವಯ ನಗರದ ಸಂಚಾರ ವ್ಯವಸ್ಥೆಯ ಕುರಿತ ಡೇಟಾವನ್ನು ಇನ್ನು ಮುಂದೆ ಐಐಎಸ್‌ಸಿ ಸಂಶೋಧಕರು, ತಜ್ಞರೊಂದಿಗೆ ಬೆಂಗಳೂರು ಸಂಚಾರಿ ಪೊಲೀಸರು ಹಂಚಿಕೊಳ್ಳಲಿದ್ದಾರೆ.
''ಬೆಂಗಳೂರು ನಗರವು ಪ್ರತಿ ತಿಂಗಳು 30 ಪೆಟಾ ಬೈಟ್‌ಗಳಿಗಿಂತ ಹೆಚ್ಚು ಡೇಟಾವನ್ನು ಉತ್ಪಾದಿಸುತ್ತಿದೆ. ಹೆಚ್ಚಾಗಿ ಬಳಕೆಯಾಗದ ಈ ಪೊಲೀಸ್ ಡೇಟಾದಿಂದ ನಗರದಲ್ಲಿನ ಸಂಚಾರ ಸುರಕ್ಷತೆ ಮತ್ತು ಸವಾಲುಗಳನ್ನು ನಿವಾರಿಸಲು ಅನುಕೂಲಕರವಾಗುವಂತಹ ಒಳನೋಟಗಳ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವುದು ಈ ಒಡಂಬಡಿಕೆಯ ಉದ್ದೇಶ'' ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ. ಅಲ್ಲದೆ, ''ಸಂಚಾರ ಸುರಕ್ಷತೆಯನ್ನು ಸುಧಾರಿಸಲು ನಮ್ಮ ಸಿಬ್ಬಂದಿಗೆ ಸರಿಯಾದ ಜ್ಞಾನದ ಮೂಲವನ್ನು ಒದಗಿಸಲು ಅನುಕೂಲಕರವಾಗುವಂತಹ ತರಬೇತಿಯನ್ನ ನಾವು ಐಐಎಸ್‌ಸಿಯಿಂದ ಎದುರುನೋಡುತ್ತಿದ್ದೇವೆ'' ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಐಐಎಸ್‌ಸಿಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ (ಸಿಐಎಸ್‌ಟಿಯುಪಿ) ಕೇಂದ್ರದ ಅಧ್ಯಕ್ಷ ಪ್ರೊ.ಅಬ್ದುಲ್ ರವೂಫ್ ಪಿಂಜಾರಿ "ಬೆಂಗಳೂರು ಸಂಚಾರಿ ಪೊಲೀಸರು ನಗರದಲ್ಲಿನ ಚಲನಶೀಲತೆ ಮತ್ತು ಸಂಚಾರ ಸುರಕ್ಷತೆಯ ಮಾಪನ ಮತ್ತು ಮೇಲ್ವಿಚಾರಣೆಯಲ್ಲಿ ಗಣನೀಯ ಪ್ರಯತ್ನಗಳನ್ನ ಮಾಡುತ್ತಿರುವುದು ಹರ್ಷದಾಯಕವಾಗಿದೆ. ಈ ಡೇಟಾವು ನಗರದ ಸಂಚಾರ ಸುರಕ್ಷತೆಯನ್ನು ಸುಧಾರಿಸಲು ಅನುಕೂಲವಾಗುವ ಸಂಶೋಧನಾ ಯೋಜನೆಗಳು ಮತ್ತು ಸೂಕ್ತವಾದ ತರಬೇತಿ ಕಾರ್ಯಕ್ರಮಗಳ ನೀಡುವ ನಿಟ್ಟಿನಲ್ಲಿ ನಮಗೆ ಮುಖ್ಯವಾಗಲಿದೆ'' ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.ಅನುಚೇತ್, ಐಐಎಸ್‌ಸಿಯ ಸಿಐಎಸ್‌ಟಿಯುಪಿ ಯೊಜನೆಯ ಅಧ್ಯಕ್ಷ ಪ್ರೊ.ಅಬ್ದುಲ್ ಪಿಂಜಾರಿ, ಸಿಐಎಸ್‌ಟಿಯುಪಿಯ ಪ್ರೊ.ವಿಜಯ್ ಕೊವ್ವಲಿ, ಬೆಂಗಳೂರು ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಐಐಎಸ್‌ಸಿಯ ಡಾ.ರಘು ಕೃಷ್ಣಪುರಂ, ರಕ್ಷಿತ್ ರಮೇಶ್ ಭಾಗಿಯಾಗಿದ್ದರು.
ಇದನ್ನೂ ಓದಿ: ತಗ್ಗಿದ ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಚಾರ ನಿಯಮ ಉಲ್ಲಂಘನೆ: ಅಪಘಾತ ಪ್ರಮಾಣ ಕೊಂಚ ಏರಿಕೆ