ಬೆಂಗಳೂರು: ದರೋಡೆ, ಬೈಕ್ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕುಖ್ಯಾತ ದರೋಡೆಕೋರನ ಎಡಗಾಲಿಗೆ ಗುಂಡು ಹಾರಿಸಿ ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಎಡಗಾಲಿಗೆ ಗುಂಡಿನ ಪೆಟ್ಟು ತಿಂದಿರುವ ದರೋಡೆಕೋರ ಶಬರೀಶ್ ಅಲಿಯಾಸ್ ಅಪ್ಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಂಧಿಸಲು ಹೋದ ಯಲಹಂಕ ಠಾಣೆಯ ಕಾನ್ಸ್ಟೇಬಲ್ ಶಿವಕುಮಾರ್ ಸಹ ಹಲ್ಲೆಗೊಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಲಹಂಕ ರೌಡಿಶೀಟರ್ ಶಬರೀಶ್ ಹಾಗೂ ಆತನ ಸಹಚರರು ಯಲಹಂಕ ಸೇರಿದಂತೆ ನಗರ ಈಶಾನ್ಯ ವಿಭಾಗದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಕಳೆದ ಫೆಬ್ರವರಿ 3 ರಂದು ಯಲಹಂಕ ಸುರಭೀ ಲೇಔಟ್ನಲ್ಲಿ ಎರಡು ಬ್ಲ್ಯಾಕ್ ಪಲ್ಸರ್ ಬೈಕ್ಸ್, ಹೋಂಡಾ ಡಿಯೋ ವಾಹನಗಳನ್ನು ಕದ್ದಿದ್ದರು. ಯಲಹಂಕ ಏರ್ ಶೋ ವೇಳೆ ಬೈಕ್ಗಳನ್ನು ಎಗರಿಸಿದ್ದರು. ಈ ಬಗ್ಗೆ ಯಲಹಂಕ ಠಾಣೆಯಲ್ಲಿ ಮೂರು ಎಫ್ಐಆರ್ಗಳು ದಾಖಲಾಗಿದ್ದವು.
ಶಬರೀಶ್ ಗ್ಯಾಂಗ್ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಸ್ಕೆಚ್ ಹಾಕಿದ್ದರು. ಈ ಮಾಹಿತಿ ಸಂಗ್ರಹಿಸಿದ ಯಲಹಂಕ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ರೆಡ್ಡಿ ನೇತೃತ್ವದ ತಂಡವು ಸ್ಥಳಕ್ಕೆ ತೆರಳಿ ಬಂಧಿಸಲು ತೆರಳಿದರು. ಈ ವೇಳೆ ದರೋಡೆಕೋರರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.
ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪೊಲೀಸರು ಹೇಳಿದ್ದಾರೆ. ಆದರೂ ಸಹ ಮತ್ತೆ ಪೊಲೀಸರ ಮೇಲೆ ಮತ್ತೆ ಹಲ್ಲೆ ಮಾಡಲು ಮುಂದಾಗಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ರಾಮಕೃಷ್ಣ ಅವರು ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ನಾಲ್ಕು ಜನ ದರೋಡೆಕೋರರ ಗ್ಯಾಂಗ್ನಿಂದ ಈಶಾನ್ಯ ವಿಭಾಗದಲ್ಲಿ ಉಪಟಳ ಹೆಚ್ಚಾಗಿತ್ತು. ಎರಡು ದಿನಗಳ ಹಿಂದೆ ಕೋಗಿಲು ಸರ್ಕಲ್ ಬಳಿ ಶಬರೀಶ್ ಗ್ಯಾಂಗ್ನಿಂದ ಮಾರುತಿ ಸುಜುಕಿ ಟ್ಯಾಕ್ಸಿ ದರೋಡೆಯಾಗಿತ್ತು. ಇದನ್ನು ಪ್ರಶ್ನಿಸಿದ ಟ್ಯಾಕ್ಸಿ ಡ್ರೈವರ್ ನಾಗರಾಜ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿತ್ತು. ಗ್ಯಾಂಗ್ನಲ್ಲಿ ಶಬರೀಶ್ ಜೊತೆಗೆ ಮುರಳಿ, ಇಮ್ರಾನ್ ಮತ್ತು ರಂಜಿತ್ ಭಾಗಿಯಾಗಿದ್ದರು.
ಆರೋಪಿಗಳೆಲ್ಲರೂ ಜೈಲಿನಲ್ಲಿ ಪರಿಚಿತರಾಗಿದ್ದರು. ಕುಮಾರಸ್ವಾಮಿ ಲೇಔಟ್, ಪೀಣ್ಯ, ಸಂಪಿಗೇಹಳ್ಳಿ, ಸಂಜಯನಗರ, ನೆಲಮಂಗಲ, ಚಿಕ್ಕಜಾಲ, ಯಲಹಂಕ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.