ಬೆಂಗಳೂರು: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸರ್ಕಾರದ ಬಾಕಿ ಪಾವತಿ ಸೇರಿದಂತೆ ಎಲ್ಲ ವಿವಿಗಳ ಆರ್ಥಿಕ ಸಮಸ್ಯೆ ಕುರಿತು ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವಿವಿ ಕುಲಪತಿಗಳು ಹಾಗು ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಎಸ್ ವಿ ಸಂಕನೂರು ಕುರಿತು ನಿಯಮ 72ರ ಅಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿಬ್ಬಂದಿಗಳಿಗೆ ವೇತನ ಹಾಗು ನಿವೃತ್ತಿ ವೇತನಕ್ಕೆ ಬೇಕಾದ ಅನುದಾನ ಬಿಡುಗಡೆ ಆಗದೇ ಇರುವುದರಿಂದ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿತಿ ಕೆಟ್ಟುಹೋಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಸಂಶೋಧನಾತ್ಮಕ ಮತ್ತು ಆಡಳಿತಾತ್ಮಕ ನಿರ್ವಹಣೆಯಲ್ಲಿ ತೊಂದರೆಯಾಗುತ್ತಿದೆ. ಸರ್ಕಾರದ ಬಾಕಿ ಹಣ ಪಾವತಿ ಮಾಡದೆ ಇದ್ದರೆ ವಿವಿ ಮುಚ್ಚಬೇಕಾಗಲಿದೆ. ಹಾಗಾಗಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎನ್ನುವ ಪ್ರಸ್ತಾಪ ಮಾಡಿದರು.
ಇದಕ್ಕೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್, ಮಂಜೂರಾತಿ ಹುದ್ದೆಗಳಿಗೆ ಸ್ಯಾಲರಿ ಕಾಂಪೋನೆಂಟ್ ವಿವಿ ಹೆಚ್.ಆರ್.ಎಂ.ಎಸ್ ಮೂಲಕ ಪಾವತಿ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಯವ್ಯಯ ಹಂಚಿಕೆಯಂತೆ ವೇತನ, ವಿಶ್ರಾಂತಿ ವೇತನಕ್ಕಾಗಿ ಒದಗಿಸಲಾದ ಅನುದಾನವನ್ನು ನಿಯಮಾನುಸಾರ ವಿವಿಗೆ ಬಿಡುಗಡೆಗೊಳಿದಲಾಗುತ್ತಿದೆ. ವಿವಿ ಶೈಕ್ಷಣಿಕ, ಸಂಶೋಧನಾತ್ಮಕ ಮತ್ತು ಆಡಳಿತ ನಿರ್ವಹಣೆಯು ವಿವಿ ಆಂತರಿಕ ಸಂಪನ್ಮೂಲದಿಂದ ನಿರ್ವಹಿಸಲ್ಪಡುತ್ತಿರುವುದರಿಂದ ವಿವಿ ಆರ್ಥಿಕ ಸ್ಥಿತಿ ಹದಗೆಟ್ಟು ವಿವಿ ಶೈಕ್ಷಣಿಕ, ಸಂಶೋಧನಾತ್ಮಕ ಮತ್ತು ಆಡಳಿತ ನಿರ್ವಹಣೆಯಲ್ಲಿ ತೊಂದರೆ ಆಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಆದರೆ ವಿವಿಗಳಲ್ಲಿ ಆರ್ಥಿಕ ಶಿಸ್ತು ಇಲ್ಲ, ಕುವೆಂಪು ವಿವಿಯಲ್ಲಿ, ಜನಪದ ವಿವಿಯಲ್ಲೂ ಗೊಂದಲ ಇದೆ, ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲದೇ ಇದ್ದಲ್ಲಿ 50-60 ವರ್ಷಗಳ ವಿವಿ ಮುಚ್ಚಬೇಕಾಗಲಿದೆ. ಹಾಗಾಗಿ ಆರ್ಥಿಕ ಇಲಾಖೆ ಸಭೆ ಕರೆದು ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗುತ್ತದೆ. ಸಿಎಂ ಕೂಡ ಸಭೆಗೆ ಸೂಚಿಸಿದ್ದಾರೆ. ಅಧಿವೇಶನ ಮುಗಿಯುತ್ತಿದ್ದಂತೆ ಹಣಕಾಸು ಇಲಾಖೆ ಅಧಿಕಾರಿಗಳು ಎಲ್ಲ ವಿವಿಗಳ ಕುಲಪತಿಗಳ ಸಭೆ ಕರೆಯಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಕಳಪೆ ಬಿತ್ತನೆ ಬೀಜ ಔಷಧ ಮಾರಾಟ ಮಾಡಿದರೆ ಕ್ರಮ: ರಾಜ್ಯದಲ್ಲಿ ಮುಂಗಾರು 10 ದಿನ ತಡವಾಗಿ ಆರಂಭವಾಗಿದೆ. ಶೇ. 36 ರಷ್ಟು ಮುಂಗಾರು ಕೊರತೆಯಾಗಿದೆ, ಕಳೆದ ಬಾರಿಗಿಂತ ಶೇ.10 ರಷ್ಟು ಕಡಿಮೆ ಬಿತ್ತನೆ ಕಾರ್ಯ ನಡೆದಿದ್ದು, ಕೃಷಿ ಚಟುವಟಿಕೆ ಉತ್ತೇಜನಕ್ಕೆ ಅಗತ್ಯ ಕ್ರಮ ವಹಿಸಲಾಗುತ್ತದೆ, ಕಳಪೆ ಬಿತ್ತನೆ ಬೀಜ ಮತ್ತು ಕಳಪೆ ಔಷಧ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಮಳೆಯ ಪ್ರಮಾಣ, ಮುಂಗಾರು ಬಿತ್ತನೆಯ ಕುರಿತು ನಿಯಮ 72ರ ಅಡಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, 2023 ಸಾಲಿನಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶವು ಸುಮಾರು 10 ದಿನಗಳಷ್ಟು ತಡವಾಗಿ ಪ್ರವೇಶವಾಗಿದ್ದು, ರಾಜ್ಯಾದ್ಯಂತ ನೈರುತ್ಯ ಮುಂಗಾರು ಮಳೆಯು 07.07 2023 ರಂತೆ ವಾಡಿಕೆ ಮಳೆ 257 ಮಿ.ಮೀ ಗೆ ಪ್ರತಿಯಾಗಿ, 166 ಮಿ.ಮೀ ಮಳೆಯಾಗಿದ್ದು, ಶೇ. 36 ರಷ್ಟು ಕೊರತೆಯಾಗಿರುತ್ತದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಹಾಗೂ ಯಾದಗಿರಿಯಲ್ಲಿ 07.07 2023 ರಂತೆ ವಾಡಿಕೆ ಮಳೆ 124 ಮಿ.ಮೀ. ಗೆ ಪ್ರತಿಯಾಗಿ, 76 ಮಿ.ಮೀ ಮಳೆಯಾಗಿದ್ದು, ಶೇ.39 ರಷ್ಟು ಕೊರತೆಯಾಗಿರುತ್ತದೆ ಎಂದು ಮಾಹಿತಿ ನೀಡಿದರು.
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ವಿವಿಧ ಕೃಷಿ ಬೆಳೆಗಳನ್ನು 82.35 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ, ಬಿತ್ತನೆ ಕೈಗೊಳ್ಳುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ. 07.07.2023 ರಂತೆ 26.82 ಲಕ್ಷ ಹೆಕ್ಟೇರ್ (ಶೇ33) ರಷ್ಟರಲ್ಲಿ ಬಿತ್ತನೆಯಾಗಿರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಹಂಗಾಮಿಗೆ ಸುಮಾರು 37.67 ಲಕ್ಷ ಹೆಕ್ಟೇರ್ ರಷ್ಟು ಮಳೆಯಾಶ್ರಿತ ಹಾಗೂ 18.54 ಲಕ್ಷ ಹೆಕ್ಟೇರ್ ರಷ್ಟು, ನೀರಾವರಿ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲಾಗುತ್ತದೆ. 2023 ನೇ ಸಾಲಿನ ಮುಂಗಾರು ಹಂಗಾಮಿಗೆ ಸದರಿ ಜಿಲ್ಲೆಗಳಲ್ಲಿ 56.20 ಲಕ್ಷ ಹೆಕ್ಟೇರ್ ರಷ್ಟು ಬಿತ್ತನೆ ಗುರಿ ಇದ್ದು, 07.07.2023ರ ವರದಿಗಳಂತೆ 20.60 ಲಕ್ಷ ಹೆಕ್ಟೇರ್ (ಶೇ.36) ರಷ್ಟರಲ್ಲಿ ಬಿತ್ತನೆಯಾಗಿರುತ್ತದೆ.
ಇದನ್ನೂ ಓದಿ: ದೇಶದ ವಿಪಕ್ಷಗಳ ಕಥೆ ಎತ್ತು ಏರಿಗೆ ಎಳೆದ್ರೆ, ಕೋಣ ನೀರಿಗೆ ಎಳೀತು ಎಂಬಂತಿದೆ: ಬಿ ವೈ ವಿಜಯೇಂದ್ರ