ಬೆಂಗಳೂರು: ದೇಶಾದ್ಯಂತ ಲಾಕ್‌ಡೌನ್ ಮೇ 3 ರ ವರೆಗೆ ವಿಸ್ತರಿಸಿದ್ದು, ತೆರವಿನ ಬಳಿಕ ಸಾರಿಗೆ ಸಂಸ್ಥೆಯ ಬಸ್‌ಗಳು ಬ್ರೇಕ್ ಡೌನ್ ಸಮಸ್ಯೆ ಎದುರಿಸುವ ಸಾಧ್ಯತೆ ಹೆಚ್ಚಾಗಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮದ 4 ವಿಭಾಗಗಳಿಂದ 25 ಸಾವಿರದಷ್ಟು ಬಸ್ಗಳಿದ್ದು, ಸದ್ಯ ಬಿಎಂಟಿಸಿಯ ಬೆರಳೆಣಿಕೆಯಷ್ಟು ಬಸ್ ಹೊರತುಪಡಿಸಿದರೆ ಉಳಿದೆಲ್ಲ ಬಸ್‌ಗಳು ನಿಲ್ದಾಣ ಹಾಗೂ ಘಟಕಗಳಲ್ಲಿ ನಿಂತಿವೆ. ಸಾಮಾನ್ಯ ಚಾಲನೆಯಲ್ಲಿರುವ ವಾಹನ ಕೆಲಕಾಲ ನಿಂತರೆ ಅದು ವಿವಿಧ ರೀತಿಯ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತದೆ.
ನೂರಾರು ಕಿ.ಮೀ. ಸಂಚರಿಸುವ ಬಸ್‌ಗಳು ಏಕಾಏಕಿ ನಿಂತಿರುವ ಹಿನ್ನೆಲೆ ಯಾವ ರೀತಿಯ ಸಮಸ್ಯೆಗಳು ಮುಂದೆ ಎದುರಿಸುತ್ತವೆಯೋ ಎಂಬ ಆತಂಕ ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ಕಾಡುತ್ತಿದೆ. ಸಾಮಾನ್ಯವಾಗಿ ಬಸ್ನ್ನು ಕನಿಷ್ಠ 4 ಲಕ್ಷ ಕಿ.ಮೀ. ಓಡಿಸುವ ಕಾರ್ಯವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೊದಲಿನಿಂದಲೂ ರೂಢಿಸಿಕೊಂಡಿದೆ.
ಎಲ್ಲ ಸರಿ ಇರುವ ಸಂದರ್ಭದಲ್ಲಿಯೇ ಆಗಾಗ ಬಸ್‌ಗಳು ಕೆಟ್ಟು ಮಾರ್ಗ ಮಧ್ಯೆ ನಿಲ್ಲುವುದನ್ನು ಸಾಕಷ್ಟು ಕಡೆ ಕಂಡಿದ್ದೇವೆ. ಇದೀಗ ತಿಂಗಳಿಂದ ಘಟಕದಲ್ಲಿ ನಿಂತಿರುವ ಬಸ್‌ಗಳು ಸಹಜವಾಗಿಯೇ ಲಾಕ್‌ಡೌನ್ ತೆರವಿನ ನಂತರ ಸಮಸ್ಯೆಗಳನ್ನು ಎದುರಿಸಲಿವೆ ಎಂದು ಆಟೋ ಮೊಬೈಲ್ ವಿಭಾಗದ ತಜ್ಞರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೇ 4 ರಿಂದ ಸಂಚಾರ ಆರಂಭಿಸಿದರೂ ಸಾಕಷ್ಟು ಕಡೆ ಹಾಳಾಗಿ ನಿಲ್ಲುವ ಆತಂಕ ಇದೆ. ಒಂದೆರಡು ವಾಹನಗಳಿದ್ದರೆ ಅದನ್ನು ಹೇಗೋ ನಿಭಾಯಿಸಬಹುದು. ಒಂದೊಂದು ಘಟಕ ಹಾಗೂ ನಿಲ್ದಾಣಗಳಲ್ಲಿ ನೂರಾರು ಬಸ್‌ಗಳು ನಿಂತಿವೆ. ಇವನ್ನು ದಿನಕ್ಕೊಮ್ಮೆ ಆನ್ ಮಾಡಿ, ಇಲ್ಲವೇ ಚಾಲನೆ ಮಾಡಿ ಪರೀಕ್ಷಿಸುವುದು ಸಾಧ್ಯವಾಗುವ ಮಾತಲ್ಲ. ಮೇ 4 ರ ನಂತರ ಒಮ್ಮೆಲೆ ಬಸ್‌ಗಳು ರಸ್ತೆಗಿಳಿಯಲು ಮುಂದಾದರೆ ಸಾಕಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
‘ಸೂಕ್ತ ಪರಿಶೀಲನೆ ಮಾಡುತ್ತಿದ್ದೇವೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೆಕ್ಯಾನಿಕ್ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ನಾವು ಸಂಸ್ಥೆಯ ಘಟಕಗಳಲ್ಲಿ ಕೆಲ ಸಿಬ್ಬಂದಿ ಕಾರ್ಯನಿರ್ವಹಣೆಯನ್ನು ಜಾರಿಯಲ್ಲಿಟ್ಟಿದ್ದೇವೆ. ನಿಂತ ವಾಹನಗಳ ನಿರಂತರ ತಪಾಸಣೆ ಹಾಗೂ ಅವುಗಳ ಕಾರ್ಯದಕ್ಷತೆಯ ಪರಿಶೀಲನೆ ನಡೆಸುತ್ತಿದ್ದೇವೆ. ಲಾಕ್‌ಡೌನ್ ತೆರವಿನ ನಂತರ ಕೆಲವೆಡೆ ಬಸ್‌ಗಳು ಬ್ರೇಕ್ ಡೌನ್ ಆಗುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ನಾವು ಇದರ ನಿರ್ವಹಣೆಗೆ ಸೂಕ್ತ ಸಿಬ್ಬಂದಿಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಸಂಸ್ಥೆಯಿಂದ ಯಾವುದೇ ತೊಂದರೆ ಹಾಗೂ ಅಡೆತಡೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕೆಎಸ್ಆರ್ಟಿಸಿ ಮೇಲಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೆನ್ನೈನಲ್ಲಿ ಲಾಕ್‌ಡೌನ್ ವೇಳೆ ಬಸ್‌ಗಳು ಹೇಗೆ ನಿರ್ವಹಿಸಲ್ಪಡುತ್ತವೆ :
ಚೆನ್ನೈನಲ್ಲಿ ಎಂಟಿಸಿ (ದಿ ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್) ಲಾಕ್‌ಡೌನ್ ಅವಧಿಯಲ್ಲಿ ವಾಹನಗಳ ನಿಯಮಿತ ನಿರ್ವಹಣೆಯನ್ನು ಮಾಡುತ್ತಿದೆ. ಎಂಜಿನ್ ತೈಲವನ್ನು ಬದಲಾಯಿಸುವುದು, ಟೈರ್‌ಗಳನ್ನು ಪರಿಶೀಲಿಸುವುದು, ರೇಡಿಯೇಟರ್‌ಗಳಲ್ಲಿನ ಶೀತಕ ದ್ರಾವಣಗಳನ್ನು ಬದಲಾಯಿಸುವುದು ಮತ್ತು ಬಸ್‌ಗಳ ವಿದ್ಯುತ್ ವೈರಿಂಗ್‌ನ ತಾಂತ್ರಿಕ ಸ್ನ್ಯಾಗ್‌ಗಳನ್ನು ಸರಿಪಡಿಸುವಲ್ಲಿ ತೊಡಗಿಸಿಕೊಂಡಿದೆ. ಹಳೆಯ ಬಸ್‌ಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ.
ಮಾರುತಿ ಸುಜುಕಿ ನಿರ್ವಹಣೆಯ ಸಲಹೆಗಳು :
- ತಿಂಗಳಿಗೊಮ್ಮೆ 15 ನಿಮಿಷಗಳ ಕಾಲ ವಾಹನವನ್ನು ಪ್ರಾರಂಭಿಸಿ ಮತ್ತು ಎಂಜಿನ್ ಚಾಲನೆಯಲ್ಲಿಡಿ.
- ಎಸ್‌ಎಚ್‌ವಿಎಸ್ ವಾಹನಗಳಿಗಾಗಿ, ತಿಂಗಳಿಗೊಮ್ಮೆ 30 ನಿಮಿಷಗಳವರೆಗೆ ಹೆಡ್‌ಲೈಟ್‌ಗಳನ್ನು 'ಆನ್' ಮಾಡುವ ಮೂಲಕ ಎಂಜಿನ್ ಚಾಲನೆಯಲ್ಲಿಡಿ.
ಇತರ ಸಲಹೆಗಳು :
- ನಿಮ್ಮ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಿ
- ಒಳಾಂಗಣವನ್ನು ಸ್ವಚ್ಛವಾಗಿಡಿ
- ಬ್ಯಾಟರಿ ಸಂಪರ್ಕ ಕಡಿತಗೊಳಿಸಿ
- ದ್ವಿಚಕ್ರ ವಾಹನವನ್ನು ಮುಖ್ಯ ಸ್ಟ್ಯಾಂಡ್‌ನಲ್ಲಿ ಇರಿಸಿ