ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ಹಲವು ವರ್ಷಗಳ ಬಳಿಕ ಕರ್ನಾಟಕ ಮೂಲದವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ನೂತನವಾಗಿ ಹೈಕೋರ್ಟ್‌ಗೆ ನೇಮಕವಾಗಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ (ಪಿ.ಬಿ. ವರಾಲೆ) ಮೂಲತಃ ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯವರಾಗಿದ್ದು, ಕಳೆದ 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕ ಮೂಲದವರೇ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವುದು ವಿಶೇಷವಾಗಿದೆ.
ನ್ಯಾ. ಆರ್. ವೆಂಕಟರಾಮಯ್ಯ ಅವರು ರಾಜ್ಯದ ಮೊದಲ ಕನ್ನಡಿಗ ಮುಖ್ಯನ್ಯಾಯಮೂರ್ತಿಯಾಗಿದ್ದರು. 1996ರಲ್ಲಿ ಕನ್ನಡಿಗರಾದ ನ್ಯಾ. ಎಸ್.ಎ. ಹಕೀಮ್ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಅದಾದ ಬಳಿಕ ಈಗ ಕರ್ನಾಟಕದಲ್ಲಿ ಜನಿಸಿದ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ರಾಜ್ಯ ಹೈಕೋರ್ಟ್‌ಗೆ ನೇಮಕಗೊಂಡಿದ್ದಾರೆ. ಆದರೆ, ಅವರು ಕಾನೂನು ಪದವಿ ಶಿಕ್ಷಣ ಪೂರೈಸಿದ್ದು, ಮಹಾರಾಷ್ಟ್ರದಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ.
ಹೈಕೋರ್ಟ್‌ನ ನ್ಯಾಯಮೂರ್ತಿಗಳು ಅದೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವ ಸಂಪ್ರದಾಯವಿತ್ತು. ಕಾಲಾಂತರದಲ್ಲಿ ಈ ಸಂಪ್ರದಾಯ ಬದಲಾಯಿತು. ಹಾಲಿ ಸಂಪ್ರದಾಯದ ಪ್ರಕಾರ ಒಂದು ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳು ಅದೇ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವುದಿಲ್ಲ. ಕೇವಲ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ನಿರ್ವಹಿಸುತ್ತಾರೆ. ಇತರೆ ರಾಜ್ಯದ ನ್ಯಾಯಮೂರ್ತಿಗಳನ್ನು ಮತ್ತೊಂದು ರಾಜ್ಯದ ಹೈಕೋರ್ಟ್ ಸಿಜೆಯಾಗಿ ನೇಮಕ ಮಾಡಲಾಗುತ್ತದೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನೂತನ ಸಿಜೆಯಾಗಿ ಪಿಬಿ ವರಾಲೆ ಪ್ರಮಾಣ ವಚನ ಸ್ವೀಕಾರ