ಬೆಂಗಳೂರು : ನಗರದ ಸ್ವಾತಂತ್ರ್ಯ ಉದ್ಯಾನವನ ಹೊರತುಪಡಿಸಿ ಯಾವುದೇ ಭಾಗದಲ್ಲಿ ರ‍್ಯಾಲಿ, ಪ್ರತಿಭಟನೆ ಮತ್ತು ಮೆರವಣಿಗೆ ಹಮ್ಮಿಕೊಳ್ಳದಂತೆ ನಿರ್ಬಂಧವಿದೆ. ಆದರೂ ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಗರದ ವಿವಿಧ ಭಾಗಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲು ಅವಕಾಶ ನೀಡಿರುವ ಸಂಬಂಧ ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಳ್ಳಲು ಕೋರಿ ವಕೀಲರೊಬ್ಬರು ಹೈಕೋರ್ಟ್ ರಿಜಿಸ್ಟ್ರಾರ್ಗೆ ಮನವಿ ಮಾಡಿದ್ದಾರೆ.
ಫ್ರೀಡಂ ಪಾರ್ಕ್ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಯಾವುದೇ ಮೆರವಣಿಗೆ ಮಾಡಬಾರದು ಎಂದು 2022 ರ ಮಾರ್ಚ್ 3 ರಂದು ಹೈಕೋರ್ಟ್ ದ್ವಿಸದಸ್ಯಪೀಠ ಆದೇಶ ನೀಡಿದೆ. ಇದೀಗ ಮೋದಿ ನಡೆಸುತ್ತಿರುವ ರ‍್ಯಾಲಿ ಹೈಕೋರ್ಟ್ ಆದೇಶಕ್ಕೆ ತದ್ವಿರುದ್ಧವಾಗಲಿದೆ. ಹೀಗಾಗಿ ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಬೇಕು ಎಂದು ವಕೀಲ ಜಿ.ಆರ್.ಮೋಹನ್ ಮನವಿಯಲ್ಲಿ ಕೋರಿದ್ದಾರೆ.
ಚುನಾವಣೆ ಪ್ರಚಾರಕ್ಕಾಗಿ ಮೇ 6 ಮತ್ತು 7 ರಂದು ನಗರದ ವಿವಿಧ ಭಾಗಗಳಲ್ಲಿ ಮೋದಿ ರ‍್ಯಾಲಿ ನಿಗದಿಯಾಗಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ರ‍್ಯಾಲಿಯಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಲಿದೆ. ಹೀಗಾಗಿ ಮನವಿ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಮೋದಿ ರೋಡ್ ಶೋನಲ್ಲಿ 3 ಬಾರಿ ಬದಲಾವಣೆ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯದೆಲ್ಲೆಡೆ ರೋಡ್ ಶೋ, ಕಾರ್ಯಕ್ರಮ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ರೋಡ್ ಶೋ ನಡೆಸಿದ್ದು ಇದೀಗ ಮತ್ತೆ ರೋಡ್ ಶೋ ನಿಗದಿಯಾಗಿವೆ. ಶನಿವಾರ ಮತ್ತು ಭಾನುವಾರ ಮೋದಿ ರೋಡ್ ಶೋ ನಿಗದಿಯಾಗಿದ್ದು ಹಲವು ಕಾರಣಗಳಿಗೆ ಒಟ್ಟು ಮೂರು ಬಾರಿ ಬದಲಾವಣೆಯಾಗಿದೆ.
ಚುನಾವಣಾ ಪ್ರಚಾರದ ಭಾಗವಾಗಿ ನಾಳೆ ಮಾತ್ರ ಅಂದರೆ ಶನಿವಾರ 6 ರಂದೇ 2 ಹಂತದಲ್ಲಿ ಮೋದಿ ಒಟ್ಟು 37 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ ಎಂದು ತೀರ್ಮಾನಿಸಲಾಗಿತ್ತು. ಆದರೆ ಶನಿವಾರ ಒಂದೇ ದಿನ ರೋಡ್ ಶೋ ನಡೆಸಲು ಮಳೆ ಮತ್ತು ಟ್ರಾಫಿಕ್ ಸಮಸ್ಯೆ ಕಾರಣದಿಂದಾಗಿ ಎರಡು ದಿನಕ್ಕೆ ಹೊಂದಾಣಿಕೆ ಮಾಡಲಾಯಿತು.
ಅದರಂತೆ ಶನಿವಾರ ಬೆಳಗ್ಗೆ ಒಟ್ಟು 10.1 ಕಿ.ಮೀ ರೋಡ್ ಶೋ, ಬೆಂಗಳೂರು ಕೇಂದ್ರ ಭಾಗದಲ್ಲಿ ಬರುವ ವಿಧಾನಸಭಾ ಕ್ಷೇತ್ರದ ರೋಡ್ ಶೋ ಸಿವಿ ರಾಮನ್ ನಗರದಿಂದ, ಬ್ರಿಗೇಡ್ ರೋಡ್‌ವರೆಗೂ, ಹಾಗೆಯೇ ಭಾನುವಾರ ಬೆಳಗ್ಗೆ 26.5 ಕಿ.ಮೀ ರೋಡ್ ಶೋ ನಡೆಸುವ ಪ್ಲಾನ್ ಮಾಡಲಾಗಿತ್ತು.
ಈಗ ಪುನಃ ನೀಟ್ ಪರೀಕ್ಷೆಗೆ ತೆರಳುವ ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ರೋಡ್ ಶೋ ಮಾರ್ಗ ಮತ್ತು ಸಮಯವನ್ನು ಮರು ಹೊಂದಾಣಿಕೆ ಮಾಡಿ ರೋಡ್ ಶೋದಲ್ಲಿ ಬದಲಾವಣೆ ಮಾಡಿದ್ದಾರೆ. ಈ ಯೋಜನೆ ಪ್ರಕಾರ, ಶನಿವಾರ ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ ಮೊದಲ ರೋಡ್ ಶೋ, ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30 ರವರೆಗೆ ಎರಡನೇ ದಿನದ ರೋಡ್ ಶೋ ನಡೆಯಲಿದೆ.
ಇದನ್ನೂ ಓದಿ: ನೀಟ್ ಪರೀಕ್ಷೆಗಾಗಿ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ