ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಬಗ್ಗೆ ವಕೀಲ ಜಗದೀಶ್ ಪ್ರತಿಕ್ರಿಯಿಸಿದ್ದು, ನ್ಯಾಯಾಂಗ ವ್ಯವಸ್ಥೆ ದಿಕ್ಕು ತಪ್ಪಿಸುವ ಕೆಲಸವಾಗ್ತಿದೆ ಎಂದು ಕಿಡಿಕಾರಿದ್ದಾರೆ.
ನಾವು ಯುವತಿಗೆ ಎಲ್ಲ ರೀತಿಯಲ್ಲಿ ಬೆಂಬಲ ನೀಡುತ್ತಿದ್ದೇವೆ, ಎಸ್ಐಟಿಗೂ ಸಹಕಾರ ಕೊಡುತ್ತಿದ್ದೇವೆ. ಆದರೂ ಆರೋಪಿಯ ಬಗ್ಗೆ ತನಿಖೆಯಾಗುತ್ತಿಲ್ಲ. ವೈದ್ಯಕೀಯ ಪರೀಕ್ಷೆ, ದಾಖಲೆ ವಶಕ್ಕೆ ಪಡೆಯುವುದು, ಮಹಜರು ಹೇಳಿಕೆ ಇವೆಲ್ಲಾ ಬಾಕಿಯಿವೆ. ಇಂತಹ ಸಮಯದಲ್ಲಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದು ನ್ಯಾಯಾಲಯಕ್ಕೆ ಮತ್ತು ಯುವತಿಗೆ ಮಾಡುವ ಮೋಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುವತಿ ಮತ್ತೆ ಮತ್ತೆ ವಿಡಿಯೋ ಮಾಡಿ ಸ್ಪಷ್ಟೀಕರಣ ಕೊಡಬೇಕಾಗುತ್ತದೆ. ಇದರಿಂದ ಪ್ರಕರಣದ ಪ್ರಕರಣದ ತನಿಖೆಗೆ ಸಮಸ್ಯೆಯಾಗುತ್ತದೆ. ಆದರೆ, ನ್ಯಾಯಾಲಯದ ಮೇಲೆ ನಂಬಿಕೆ ಇಡೋಣ. ಯಾವುದೇ ವಿಚಾರವಿದ್ದರೂ ಮಾಧ್ಯಮದವರು ಪರಿಶೀಲನೆ ಮಾಡಿ ಪ್ರಸಾರ ಮಾಡಿ ಎಂದು ಮನವಿ ಮಾಡಿದರು.
ಈಗಾಗಲೇ ಸಿಟಿ ಸಿವಿಲ್ ಕೋರ್ಟ್ನಲ್ಲಿ ಸುದ್ದಿ ನಿರ್ಬಂಧ ಕೋರಿ ಯುವತಿ ಅರ್ಜಿ ಸಲ್ಲಿಸಿದ್ದಾಳೆ. ನಾವು ಎಲ್ಲ ರೀತಿಯ ಸತ್ಯಾಸತ್ಯತೆಯನ್ನು ಮಾಧ್ಯಮದವರಿಗೆ ತಿಳಿಸುತ್ತಾ ಬಂದಿದ್ದೇವೆ, ಮುಂದೆಯೂ ತಿಳಿಸುತ್ತೇವೆ. ಒಂದು ವೇಳೆ ನ್ಯಾಯಾಲಯದಿಂದ ಅಡೆತಡೆ ಬಂದರೆ, ಅದೂ ಕೂಡ ತಿಳಿಸುತ್ತೇವೆ. ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗೆ ಒಂದು ನ್ಯಾಯ, ಯುವತಿಗೆ ಒಂದು ಎಂಬುದು ಎದ್ದು ಕಾಣಿಸುತ್ತಿದೆ ಎಂದರು.
ಓದಿ : ಸಿಡಿ ಪ್ರಕರಣ: ಮತ್ತೊಂದು ವಿಡಿಯೋ ಹರಿಬಿಟ್ಟ ಲೇಡಿ, ಹನಿಟ್ರ್ಯಾಪ್ ಕುರಿತು ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ಎಸ್ಐಟಿ ಆರೋಪಿ ಪರವಾಗಿ ಕೆಲಸ ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳ ಕೈಯನ್ನು ರಾಜ್ಯ ಸರ್ಕಾರ ಕಟ್ಟಿ ಹಾಕಿದೆ. ಯುವತಿಯದ್ದು ಸರಿಯೋ ತಪ್ಪೋ ಆಕೆ ಧೈರ್ಯ ಮಾಡಿ ಮುಂದೆ ಬಂದಿದ್ದಾಳೆ. ನನಗೆ ಅನ್ಯಾಯ ಆಗಿದೆ ಎಂದು ಹೇಳಿದ್ದಾಳೆ. ಇದರ ತನಿಖೆ ನಡೆಸಿ ನ್ಯಾಯ ಕೊಡುವುದು ನ್ಯಾಯಾಲಯದ ಕೆಲಸ. ನ್ಯಾಯಾಲಯ ಏನು ತೀರ್ಪು ಕೊಡುತ್ತದೆ ಎಂದು ಕಾದು ನೋಡೋಣ ಎಂದು ಹೇಳಿದರು.