ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೆಚ್ಚಿನ ಒತ್ತಡ ಇದೆ. ಹಾಗಾಗಿ ತುಮಕೂರು ಅಥವಾ ಕೋಲಾರದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು. ಗುಲ್ಬರ್ಗಾ ವಿಮಾನ ನಿಲ್ದಾಣದ ಮಾದರಿಯಲ್ಲಿ ಬೀದರ್ ಮತ್ತು ವಿಜಯಪುರದಲ್ಲೂ ವಿಮಾನ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ ಎಂದು ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಮಾನ ನಿಲ್ದಾಣದ ನಂತರ ಹತ್ತು ವರ್ಷಗಳಲ್ಲಿ ಯಾವುದೇ ವಿಮಾನ ನಿಲ್ದಾಣವನ್ನು ನಿರ್ಮಿಸಿಲ್ಲ. ಮುಂದಿನ ಮೂರು ವರ್ಷಗಳಲ್ಲಿ 3 ಜಿಲ್ಲೆಗಳಿಗೆ ಒಂದರಂತೆ ಒಟ್ಟು 10 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸ್ಥಳವನ್ನು ಹುಡುಕಲಾಗಿದ್ದು, ಸ್ಮಾರ್ಟ್ ಸಿಟಿಯಾದ ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಚೆನ್ನೈ, ಬೆಂಗಳೂರು ಹಾಗೂ ಮುಂಬೈ ಕಾರಿಡಾರ್ ಯೋಜನೆಗೆ ಅನುಕೂಲವಾಗಬಹುದೆಂಬ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
- ಕಲಬುರಗಿ ವಿಮಾನ ನಿಲ್ದಾಣದ ರೀತಿಯಲ್ಲಿಯೇ ಬೀದರ್ ಜಿಲ್ಲೆಯಲ್ಲಿ ಇನ್ನು ಒಂದು ತಿಂಗಳಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಯೋಜನಾ ಇಲಾಖೆಯು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 20 ಕೋಟಿ ರೂ. ಅನುದಾನ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿದೆ. ಹೊಸ ವಿಮಾನ ನಿಲ್ದಾಣ ಬರುವ ಕಡೆಗೆ ಕೈಗಾರಿಕಾ ಪ್ರದೇಶ, ಆವಿಷ್ಕಾರ ನಗರಗಳನ್ನು ಖಾಸಗಿ -ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ನಿರ್ಮಾಣ ಮಾಡಿ ಅಭಿವೃದ್ಧಿ ಕೇಂದ್ರಗಳನ್ನಾಗಿ ಮಾಡಬಹುದೆಂದು ಸಲಹೆ ನೀಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸೀನ್ ಸಿಟಿ ಯೋಜನೆ ಇದ್ದು, ಸರ್ಕಾರದ ವತಿಯಿಂದ ಸಿವಿಲ್ ಟರ್ಮಿನಲ್ಗಳನ್ನು ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.
- ಗ್ರಾಮೀಣಾಭಿವೃದ್ದಿ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯತೆ ಕೊರತೆ ಕಾರಣದಿಂದಾಗಿ ಸುಸ್ಥಿರ ಅಭಿವೃದ್ದಿ ಗುರಿ ಸಾಧನೆ ವಿಷಯದಲ್ಲಿ ಕರ್ನಾಟಕ 40ನೇ ಸ್ಥಾನದಲ್ಲಿ ಕುಸಿದಿದೆ ಎಂದು ಮಾಹಿತಿ ನೀಡಿದರು.
- ರಾಜ್ಯದ 4,600 ಗ್ರಾಮಗಳಿಗೆ ರಾಜ್ಯ ರಸ್ತೆ ಸಾರಿಗೆ ಬಸ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಸೂಕ್ತ ರಸ್ತೆಗಳಿಲ್ಲದೇ ಬಸ್ ಸೌಲಭ್ಯ ಸಾಧ್ಯವಾಗಿಲ್ಲ. ಹೀಗಾಗಿ, ಎಲ್ಲ ಗ್ರಾಮಗಳಿಗೂ ವಾಹನಗಳು ಸಂಚರಿಸಲು ಯೋಗ್ಯವಾದ ರಸ್ತೆ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ಹೇಳಿದರು.
- ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪ್ರಮಾಣ ಹೆಚ್ಚಾಗಬೇಕಿದೆ. ರಾಜ್ಯದಲ್ಲಿ ಶಿಕ್ಷೆ ವಿಧಿಸುವ ಪ್ರಮಾಣ ಶೇ.2 ರಿಂದ 4 ರಷ್ಟಿದೆ. ಈ ಪ್ರಮಾಣವನ್ನು ಹೆಚ್ಚಿಸಲು ಶೀಘ್ರದಲ್ಲೇ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
- ಕರಾವಳಿ ಭಾಗಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ತದಡಿಯಲ್ಲಿ ಯಾವುದೇ ಪರಿಸರ ಸಂಬಂಧಿ ಸಮಸ್ಯೆ ಇಲ್ಲದೇ ಇರುವುದರಿಂದ ಬಂದರು, ವಿಮಾನ ನಿಲ್ದಾಣ, ರೈಲ್ವೆ ಸಂಪರ್ಕವನ್ನು ಪಿಪಿಪಿ ಮಾದರಿಯಲ್ಲಿ ಸೇರಿಸಿದಲ್ಲಿ ಆ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬ ಸಲಹೆ ನೀಡಲಾಗಿದೆ.
- ಇನ್ನು ಪ್ರವಾಸೋದ್ಯಮ ಇಲಾಖೆಯ ಪ್ರಸ್ತುತ ಜಿಡಿಪಿ ಶೇ.14.8 ರಷ್ಟು ಇದ್ದು, ಇದನ್ನು ಶೇ.25 ರಷ್ಟು ಏರಿಸಲು ಉತ್ತಮ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಒಂದು ಸಮಗ್ರ ಹಾಗೂ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
- ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಒಂದು ಜಿಲ್ಲೆಗೆ ಒಂದು ಪ್ರವಾಸಿ ತಾಣ ಗುರುತಿಸಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲಾಖೆಯ 319 ತಾಣಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ 20 ಅತಿ ವಿಶೇಷವಾಗಿವೆ. ಅದೇ ರೀತಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಗೃಹ ಇಲಾಖೆ, ಕಾನೂನು ಇಲಾಖೆ, ಲೋಕೋಪಯೋಗಿ, ಸಾರಿಗೆ, ಸಾರ್ವಜನಿಕ ಸಂಪರ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಹೇಳಿದರು.
- ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಮೂಲಕ ‘ ಅವಲೋಕನ ’ ಎಂಬ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಸದರಿ ತಂತ್ರಾಂಶದ ಮೂಲಕ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನದ ಬಗ್ಗೆ ಕೂಡ ನಿಗಾ ಇರಿಸಬಹುದಾಗಿದೆ. ಈ ತಂತ್ರಾಂಶ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಅವರು ಮಾಹಿತಿ ನೀಡಿದರು.
- ಗಿರಿಜನರಿಗೆ ಮೂಲ ಸೌಲಭ್ಯಗಳ ಕೊರತೆ ಇನ್ನೂ ಕಾಡುತ್ತಿದೆ. ಯೋಜನೆಗಳ ಸವಲತ್ತನ್ನು ಅನ್ಯರು ಪಡೆಯುತ್ತಿದ್ದಾರೆ. ಹೀಗಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಿರಿಜನರಿಗೆ ಪ್ರತ್ಯೇಕ ಸ್ಥಾನಮಾನ ಕಲ್ಪಿಸಬೇಕು. ಗಿರಿಜನರಿಗೆ ಪ್ರತ್ಯೇಕ ಮೀಸಲು ನೀಡಿದರೆ ಇವರ ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ. ಅದರಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.