ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ಅಪರಾಧ ಚಟುವಟಿಕೆಗಳು ಜಾಸ್ತಿಯಾಗುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಸೂಚಿಸಿದೆ. ಕೆಲ ಅಪರಾಧಗಳು ಪೊಲೀಸರ ಕಣ್ತಪ್ಪಿ ನಡೆದು ಹೋಗುತ್ತವೆ. ಹೀಗಾಗಿ ಸಿಸಿಟಿವಿ ಕ್ಯಾಮರಾಗಳ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.
ನಗರದಲ್ಲಿ ಪೊಲೀಸರ ಕಣ್ಗಾವಲಿನಲ್ಲಿ ಸುಮಾರು 579 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 'ನಿರ್ಭಯಾ ನಿಧಿ'ಯಡಿ 7,500 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಸದ್ಯ ನಾಲ್ಕು ಮಾದರಿಯ ಕ್ಯಾಮರಾಗಳಿದ್ದು, ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿವೆ.
ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವನ್ನು ನಗರದ ಆಯುಕ್ತರ ಕಚೇರಿ ಹಾಗೂ ಟ್ರಾಫಿಕ್ ಆಯುಕ್ತರ ಕಚೇರಿಯಲ್ಲಿ ವೀಕ್ಷಣೆ ಮಾಡಲಾಗುತ್ತದೆ. ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂಥ್ ನಗರದಲ್ಲಿ ಪ್ರತಿ ದಿನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಮಾನಿಟರ್ ಮಾಡ್ತಾರೆ.