ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು ಹಾಗೂ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ 6 ಮಂದಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದರಿಂದ ವಿಧಾನಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ಸಂಧಾನ ಸಭೆ ಮುಗಿದ ಬಳಿಕ ಸದನ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಕೈಯಲ್ಲಿ ಸಿಡಿ ಹಿಡಿದು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸದನದ ಅಮೂಲ್ಯ ಸಮಯ ಹಾಳು ಮಾಡಬೇಡಿ. ಬಜೆಟ್ ಮೇಲಿನ ಚರ್ಚೆ ಹಾಗೂ ಬೇಡಿಕೆಗಳ ಮೇಲೆ ಚರ್ಚೆ ಆಗಬೇಕಿದೆ. ಪ್ರತಿಪಕ್ಷದ ಸದಸ್ಯರಲ್ಲದೆ ಆಡಳಿತ ಪಕ್ಷದ ಸದಸ್ಯರಿಗೂ ಸದನ ಇದೆ. ಹಾಗಾಗಿ, ಸದನದ ಕಲಾಪವನ್ನು ಸುಗಮವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಎಂದು ಮನವಿ ಮಾಡಿದರು.
ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು, ಸರ್ಕಾರದ ವಿರುದ್ಧ ಧಿಕ್ಕಾರ ಕೊಗತೊಡಗಿದರು. ಈ ವೇಳೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರ ನೀಡಿರುವ ಉತ್ತರ ನಮಗೆ ತೃಪ್ತಿ ತಂದಿಲ್ಲ. ಮೊದಲು ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಾಜಿ ಸಚಿವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಸತ್ಯ ಹೊರ ಬರುವುದು ನಮ್ಮ ಉದ್ದೇಶ. ಇದರ ಜೊತೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ 6 ಮಂದಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅವರು ಸಚಿವ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆ ಇಲ್ಲ ಎಂದು ಹೇಳಿದರು.
ಈ ಪ್ರಕರಣದ ಕುರಿತು ಈಗಾಗಲೇ ಸರ್ಕಾರ ಉತ್ತರ ನೀಡಿದೆ. ನಿಮಗೆ ಈ ಉತ್ತರದಿಂದ ತೃಪ್ತಿ ಇಲ್ಲದೆ ಇದ್ದರೆ ಸದನದ ಹೊರಗೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಈಗ ಸದನದ ಕಲಾಪಗಳನ್ನು ಸುಗಮವಾಗಿ ನಡೆಯಲು ಸಹಕರಿಸಿ ಎಂದು ಸ್ಪೀಕರ್ ಮತ್ತೊಮ್ಮೆ ಮನವಿ ಮಾಡಿದರು. ಯಾವುದಕ್ಕೂ ಬಗ್ಗದ ಪ್ರತಿಪಕ್ಷದ ಸದಸ್ಯರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಲೇ ಇದ್ದರು. ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು ಸಹ ಸಿಡಿ ತಯಾರು ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರವೆಂದು ಕೂಗತೊಡಗಿದರು. ಇದರಿಂದಾಗಿ ಸದನದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆಂಬುದೇ ಅರ್ಥವಾಗದ ಹಾಗಾಯಿತು. ಗದ್ದಲ ಹೆಚ್ಚಾದ ಕಾರಣ ಸ್ಪೀಕರ್ ಕಾಗೇರಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಿಡಿ ತಯಾರಿಸಿರುವ ಕಾಂಗ್ರೆಸ್ಸಿಗರಿಗೆ ಧಿಕ್ಕಾರ ಎಂದು ಕೂಗಿದರು. ಸದನದಲ್ಲಿ ಗದ್ದಲ ಜೋರಾದಾಗ ಸರ್ಕಾರದ ನಿಲುವು ಏನು ಎಂದು ಸಭಾಧ್ಯಕ್ಷ ಕಾಗೇರಿ, ಸಚಿವ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು. ಈಗಾಗಲೇ ಸರ್ಕಾರದಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಸುದೀರ್ಘ ಉತ್ತರ ಕೊಡಲಾಗಿದೆ. ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಉದ್ದೇಶವಿಲ್ಲ. ಎಸ್‍ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದೆ. ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ. ಇದು ಬಜೆಟ್ ಅಧಿವೇಶನವಾಗಿರುವುದರಿಂದ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಸರ್ಕಾರದ ಉತ್ತರ ಪಡೆಯುತ್ತಾರೆ. ಇದು ಅವರ ಹಕ್ಕು ಕೂಡ ಎಂದು ಗೃಹ ಸಚಿವರು ಹೇಳಿದರು.
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ರಾಜ್ಯದಲ್ಲೂ ನಿಮ್ಮ ಪಕ್ಷವನ್ನು ಬಾವಿಗೆ ತಳ್ಳಿದ್ದಾರೆ. ದೇಶದಲ್ಲೂ ಕೂಡ ನೀವು ಬಾವಿಗೆ ಬಿದ್ದಿದ್ದೀರಿ. ಮುಂದೆಯೂ ಕೂಡ ಬಾವಿಯಲ್ಲೇ ಇರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ ಅವರು, ಸಿಡಿ ತಯಾರಕರು ಅವರೇ. ಸಿಡಿ ಫ್ಯಾಕ್ಟರಿಯೇ ಇದೆ. ಮೊದಲು ಪ್ರಶ್ನೋತ್ತರ ಅವಧಿ ಮುಗಿಯಲಿ, ನಂತರ ಏನು ಉತ್ತರ ಕೊಡುತ್ತಾರೆ ಎಂದು ನೋಡೋಣ. ಏಕಾಏಕಿ ಬಾವಿಗಿಳಿದು ಪ್ರತಿಭಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸಂಧಾನ ಸಭೆ ವಿಫಲ:
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಕಾಂಗ್ರೆಸ್ ನಾಯಕರು ತಮ್ಮ ಪಟ್ಟು ಸಡಿಲಿಸಲಿಲ್ಲ.
ಕಾಂಗ್ರೆಸ್ ಬೇಡಿಕೆ ಏನು? :
ಸಂತ್ರಸ್ತ ಯುವತಿ ಹೇಳಿಕೆ ಮೇಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್ ದಾಖಲು ಮಾಡಬೇಕು. 6 ಮಂದಿ ಸಚಿವರು ರಾಜೀನಾಮೆ ನೀಡಬೇಕು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಸಿಡಿ ಪ್ರಕರಣದ ತನಿಖೆ ನಡೆಯಬೇಕು ಎಂದು ಸಭೆಯಲ್ಲಿ ಕಾಂಗ್ರೆಸ್ ಬೇಡಿಕೆ ಇಟ್ಟಿದ್ದು, ಇದಕ್ಕೆ ಬಿಜೆಪಿ ಸರ್ಕಾರ ಒಪ್ಪಲಿಲ್ಲ ಎನ್ನಲಾಗಿದೆ. ಹಾಗಾಗಿ ಸದನದಲ್ಲಿ ಧರಣಿ ಮುಂದುವರೆಸಲು ಕಾಂಗ್ರೆಸ್ ತೀರ್ಮಾನಿಸಿದೆ.